ಬಂಟ್ವಾಳ: ಶಾಲಾ ಮಕ್ಕಳ ಕೈಯಲ್ಲಿ ಕೊಡಲಿ ರೂಪದ ಪೆನ್ಸಿಲ್: ಪೋಷಕರ ಆಕ್ರೋಶ
ಬಂಟ್ವಾಳ: ಆಧುನಿಕ ಯುಗದಲ್ಲಿ ಆಹಾರ ಪದಾರ್ಥಗಳ ಸಹಿತ ಇತರ ಜನರ ನಿತ್ಯದ ಉಪಯೋಗಿಸುವ ವಸ್ತಗಳಲ್ಲಿ ವೈವಿಧ್ಯತೆಯನ್ನು ತರಲಾಗಿದೆ, ಜನರ ಆಕರ್ಷಣೆಯ ದೃಷ್ಟಿಯಿಂದ ಹೊಸಹೊಸ ಪ್ರಯೋಗಗಳನ್ನು ಮಾಡಿ, ಜನರನ್ನು ಮರಳು ಮಾಡಿ ವ್ಯವಹಾರದಲ್ಲಿ ಯಶಸ್ವಿಯಾಗುತ್ತಿದ್ದಾರೆ. ಆದರೆ ಬದಲಾವಣೆ ಗಾಳಿ ಸಣ್ಣ ಮಕ್ಕಳ ಬರವಣಿಗೆಯ ಪೆನ್ಸಿಲ್ ಗೂ ಬಂದಿದೆ.
ತಾಲೂಕಿನ ಪ್ರಾಥಮಿಕ ಶಾಲಾ ಮಕ್ಕಳ ಕೈಯಲ್ಲಿ ಕೊಡಲಿ ರೂಪದ ಪೆನ್ಸಿಲ್, ವಿವಾದಾತ್ಮಕ ಪೆನ್ಸಿಲ್ ಮಾರಾಟ ಮಾಡುವ ವ್ಯಕ್ತಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಪೋಷಕರು ಒತ್ತಾಯ ಮಾಡಿದ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಗಡಿಯಾರ ಎಂಬಲ್ಲಿ ನಡೆದಿದೆ.
ಕೆದಿಲ ಗ್ರಾಮದ ಗಡಿಯಾರ ಪ್ರಾಥಮಿಕ ಶಾಲೆಯ ಮಕ್ಕಳ ಕೈಯಲ್ಲಿ ಈ ಪೆನ್ಸಿಲ್ ಕಂಡು ಬಂದಿದ್ದು,ಪೋಷಕರು ಈ ವಿವಾದಾತ್ಮಕ ಪೆನ್ಸಿಲ್ ನ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಕಾರಿ ಶಾಲೆಗಳಿಗೆ ಬೇಟಿ ನೀಡುವ ಈ ಮಾರಾಟಗಾರರು ಮಕ್ಕಳಿಗೆ ಬೇಕಾಗುವ ಪೆನ್ಸಿಲ್ ನ ಆರ್ಡರ್ ಪಡೆದುಕೊಂಡು ಹೋಗುತ್ತಾರೆ. ಅದರ ಬೆಲೆಯನ್ನು ತಿಳಿಸುತ್ತಾರೆ. ಎರಡು ದಿನಗಳ ಬಳಿಕ ಬಂದು ಪೆನ್ಸಿಲ್ ನೀಡುತ್ತಾರೆ ಎಂದು ಪೋಷಕರು ತಿಳಿಸಿದ್ದಾರೆ.
ರೂ.20 ಮುಖ ಬೆಲೆಯ ಈ ಪೆನ್ಸಿಲ್ ನೋಡಲು ಬಲು ಸುಂದರವಾಗಿದೆಯಾದರೂ, ಅದರ ಒಂದು ಭಾಗದಲ್ಲಿ ಕೊಡಲಿಯನ್ನು ಹೋಲುವ ಮತ್ತು ಶೈಲಿಯಲ್ಲಿ ಇದ್ದು, ಮಕ್ಕಳ ಕೈಗೆ ಅಥವಾ ಇತರರಿಗೆ ಗಾಯವಾಗುವ ಅವಕಾಶಗಳೇ ಹೆಚ್ಚು ಇದೆ ಎಂದು ಪೋಷಕರು ತಿಳಿಸಿದ್ದಾರೆ.
ಇಂತಹ ವಿವಾದಾತ್ಮಕ ಮತ್ತು ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ವಸ್ತುಗಳ ಮಾರಾಟಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅವಕಾಶ ನೀಡಬಾರದು ಎಂಬುದು ಪೋಷಕರ ಮಾತು.
ಸಣ್ಣ ಮಕ್ಕಳ ಕೈಗೆ ಕೊಡಲಿ ರೂಪದ ಪೆನ್ಸಿಲ್ ನೀಡಿದರೆ ಅವರ ಭಾವನೆಗಳ ಮೇಲೆ ಪ್ರಭಾವ ಬೀರುವ ಬಗ್ಗೆ ತಿಳಿಯದ ಶಿಕ್ಷಕರ ಬಗ್ಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಾರಾಟಗಾರರು ತಾಲೂಕಿನ ವಿವಿಧ ಶಾಲೆಗಳಿಗೆ ಬೇಟಿ ನೀಡಿ ಇದೇ ರೀತಿಯ ಪೆನ್ಸಿಲ್ ಗಳನ್ನು ಮಾರಟ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.