ವರನ ಮನೆಯಲ್ಲಿ ಯುವತಿ ಅನುಮಾನಾಸ್ಪದವಾಗಿ ಸಾವು
ಜಯನಗರ: ಕಳೆದ 10 ವರ್ಷಗಳಿಂದ ಪ್ರೀತಿಸಿ, ಎರಡು ಕುಟುಂಬವನ್ನು ಒಪ್ಪಿಸಿ ಇನ್ನೇನು ಮದುವೆಯಾಗಬೇಕು ಎಂದು ಭಾರಿ ಸಿದ್ಧತೆ ಮಾಡಿಕೊಂಡು ಮದುವೆಗೆ ಕೇವಲ ಎರಡು ದಿನ ಬಾಕಿ ಇರುವಾಗ ವಧು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವಿಜಯನಗರದ ಟಿವಿ ಕಾಲೋನಿಯಲ್ಲಿ ನಡೆದಿದೆ.
ಐಶ್ವರ್ಯ ಆತ್ಮಹತ್ಯೆಗೆ ಶರಣಾದ ಯುವತಿ. ಐಶ್ವರ್ಯ ಹಾಗೂ ಅಶೋಕ್ ಕಳೆದ ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆಗೆ ಇನ್ನೇನು ಎರಡು ದಿನ ಮಾತ್ರ ಬಾಕಿ ಇತ್ತು. ಮದುವೆ ಶಾಸ್ತ್ರಕ್ಕೆ ಎಂದು ವರನ ಮನೆಯವರು ವಧುವನ್ನು ಕರೆದುಕೊಂಡು ಹೋಗಿದ್ದರು. ಆದರೆ ಐಶ್ವರ್ಯ ಈಗ ವರನ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ.
ಐಶ್ವರ್ಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಅಶೋಕ್ ಜೊತೆ ನ.23ರಂದು ಮದುವೆ ನೆರವೇರಬೇಕಿತ್ತು. ಅಂತರ್ಜಾತಿ ವಿವಾಹವಾದರೂ ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಕಾರಣಕ್ಕೆ ಮನೆಯಲ್ಲಿ ವಿವಾಹಕ್ಕೆ ಒಪ್ಪಿದ್ದರು. ಮದುವೆ ಶಾಸ್ತ್ರಕ್ಕೆಂದು ವರನ ಮನೆಗೆ ಹೋದ ವಧು ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ನಮ್ಮ ಸಂಪ್ರದಾಯಕ್ಕೆ ಹೊಂದಲ್ಲ ಎಂದು ನಾನು ಮಗಳಿಗೆ ಹೇಳಿದ್ದೆ. ಆದರೆ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರಿಂದ ಒಪ್ಪಿದ್ದೆವು. ವರನ ಕಡೆಯವರು ನಾವೇ ಮದುವೆ ಮಾಡುತ್ತೇವೆ. ಮಧುವಿನ ಕಡೆಯವರು ಬರುವುದು ಬೇಡ ಎಂದು ಕಂಡಿಷನ್ ಹಾಕಿದ್ದರು. ಈಗ ಮಗಳು ಆತ್ಮಹತ್ಯೆ ಮಾಡಿಕೊಂದಿದ್ದಾಳೆ ಎನ್ನುತ್ತಿದ್ದಾರೆ. ಎರಡು ಮೂರು ಆಸ್ಪತ್ರೆಗೆ ಕರೆದೊಯ್ದರು ಬದುಕಿಲ್ಲ ಎನ್ನುತ್ತಿದ್ದಾರೆ. ಮಗಳು ತುಂಬಾ ಗಟ್ಟಿ ಆತ್ಮಹತ್ಯೆ ಮಾಡಿಕೊಳ್ಳುವಂತವಳಲ್ಲ. ಈಗ ಇದ್ದಕ್ಕಿದ್ದಂತೆ ವರನ ಮನೆಯಲ್ಲಿ ಹೀಗಾಗಿರುವುದು ಸಾಕಷ್ಟು ಅನುಮಾನ ತಂದಿದೆ. ಮಗಳ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಐಶ್ವರ್ಯ ತಂದೆ ದೂರು ನೀಡಿದ್ದಾರೆ.