ಕಡಬ: ಸೌದಿ ಅರೇಬಿಯಾದ ಜೈಲಿನಲ್ಲಿ ಬಂಧಿಯಾಗಿದ್ದ ಕಡಬ ಮೂಲದ ಯುವಕನ ಬಿಡುಗಡೆ
ಕಡಬ: ಬ್ಯಾಂಕ್ ಖಾತೆ ಹ್ಯಾಕರ್‌ಗಳ ಸುಳಿಗೆ ಸಿಲುಕಿ ವಂಚನೆ ಆರೋಪಕ್ಕೆ ಒಳಗಾಗಿ ಕಳೆದ 11 ತಿಂಗಳುಗಳಿಂದ ಸೌದಿ ಅರೇಬಿಯಾದ ರಿಯಾದ್‌ನ ಜೈಲಿನಲ್ಲಿ ಬಂಧಿಯಾಗಿದ್ದ ಕಡಬ ತಾಲೂಕು ಐತ್ತೂರು ಗ್ರಾಮದ ಮೂಜೂರು ನಿವಾಸಿ ಚಂದ್ರಶೇಖರ್ ಬಂಧಮುಕ್ತನಾಗಿದ್ದು, ಇಂದು ಸ್ವದೇಶಕ್ಕೆ ಆಗಮಿಸುವ ನಿರೀಕ್ಷೆ ಇದೆ.
ರಿಯಾದ್ ನ ಪೊಲೀಸರು ಚಂದ್ರಶೇಖರ್ ಅವರನ್ನು ವಿಮಾನದಲ್ಲಿ ಮುಂಬಯಿಗೆ ಕಳುಹಿಸಿಕೊಡಲಿದ್ದು, ಅಲ್ಲಿಂದ ಅವರು ಸಂಜೆ ವಿಮಾನದಲ್ಲಿ ಮಂಗಳೂರಿಗೆ ಪ್ರಯಾಣಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಅಲ್ಪಾನರ್ ಸೆರಾಮಿಕ್ಸ್ ಎಂಬ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಕೆಲಸದಲ್ಲಿ ಪದೋನ್ನತಿ ಪಡೆದು 2022ರಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿದ್ದರು.
2022ರ ನವೆಂಬರ್‌ನಲ್ಲಿ ಮೊಬೈಲ್ ಮತ್ತು ಸಿಮ್ ಖರೀದಿಗೆ ರಿಯಾದ್‌ನ ಅಂಗಡಿಗೆ ಭೇಟಿ ನೀಡಿ ಅರ್ಜಿಯೊಂದಕ್ಕೆ ಎರಡು ಬಾರಿ ಹೆಬ್ಬೆಟ್ಟು ಸಹಿ ನೀಡಿದ್ದರು. ವಾರದ ಬಳಿಕ ಅವರಿಗೆ ಅರೇಬಿಕ್ ಭಾಷೆಯಲ್ಲಿ ಹೊಸ ದೂರವಾಣಿ ಸಂಖ್ಯೆಗೆ ಸಂದೇಶ ಬಂದಿತ್ತು.
ಅದನ್ನು ತೆರೆದು ಚಂದ್ರಶೇಖರ್ ನೋಡಿದ್ದರು. 2 ದಿನಗಳ ಬಳಿಕ ದೂರವಾಣಿ ಕರೆ ಬಂದು ಸಿಮ್‌ನ ಬಗ್ಗೆ ಮಾಹಿತಿ ಕೇಳಲಾಗಿತ್ತು. ಒಟಿಪಿ ತಿಳಿಸಿದ್ದರು. ವಾರದ ಬಳಿಕ ಅಲ್ಲಿನ ಪೊಲೀಸರು ಬಂದು ಚಂದ್ರಶೇಖರ್ ಅವರನ್ನು ಬಂಧಿಸಿದ್ದರು.