ಪುತ್ತೂರು: ತಲವಾರು ಪ್ರದರ್ಶಿಸಿದ ಪ್ರಕರಣ: ಇಬ್ಬರು ಅಪ್ರಾಪ್ತ ಬಾಲಕರ ಸಹಿತ 9 ಮಂದಿಯ ವಿರುದ್ಧ ಪ್ರಕರಣ ದಾಖಲು
ಪುತ್ತೂರು : ನಗರ ಠಾಣಾ ವ್ಯಾಪ್ತಿಯ ಮುಕ್ರಂಪಾಡಿಯಲ್ಲಿ ಸಾರ್ವಜನಿಕವಾಗಿ ತಲವಾರು ಪ್ರದರ್ಶಿಸಿರುವ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಬಾಲಕರ ಸಹಿತ 9 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ನ.10 ಮಧ್ಯಾಹ್ನ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ರಂಪಾಡಿ ಎಂಬಲ್ಲಿ ಕೆಲ ಯುವಕರು ಸಾರ್ವಜನಿಕವಾಗಿ ತಲವಾರು ಪ್ರದರ್ಶಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನೆ ನಡೆದ ತಕ್ಷಣವೇ ಆರೋಪಿಗಳಾದ ಪುತ್ತೂರು ಶಾಂತಿಗೋಡು ಗ್ರಾಮದ ದಿನೇಶ ಪಂಜಿಗ (38), ನರಿಮೊಗರು ಗ್ರಾಮದ ಭವಿತ್ (19), ಪುತ್ತೂರು ಬೊಳ್ವಾರು ನಿವಾಸಿ ಮನ್ವಿತ್ (19), ಆರ್ಯಾಪು ಗ್ರಾಮದ ಜಯಪ್ರಕಾಶ (18), ಚಿಕ್ಕಮುಡ್ನೂರು ಗ್ರಾಮದ ಚರಣ್ (23), ಬನ್ನೂರು ಗ್ರಾಮದ ಮನೀಶ (23), ವಿನೀತ್ (19) ಹಾಗೂ ಇಬ್ಬರು ಅಪ್ರಾಪ್ತ ಪ್ರಾಯದ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಕ್ರ: 108/2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಸಾರ್ವಜನಿಕರು ಈ ಬಗ್ಗೆ ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ಹಾಗೂ ಸುಳ್ಳು ವದಂತಿಗಳನ್ನು ಪ್ರಸಾರ ಮಾಡಬಾರದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.





