ಪುತ್ತೂರು: ನ.13 ರಂದು ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ 50 ಸಾವಿರ ಮಂದಿಗೆ ವಸ್ತ್ರ ವಿತರಣೆ, ಸಹಭೋಜನ: ಶಾಸಕ ಅಶೋಕ್ ಕುಮಾರ್ ರೈ ಮಾಹಿತಿ
ವಿಟ್ಲ: ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವರ್ಷಂಪ್ರತಿ ನೀಡಲ್ಪಡುವ ವಸ್ತ್ರ ದಾನ ಕಾರ್ಯಕ್ರಮ ನ.13 ರಂದು ಪುತ್ತೂರು ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಸಂಸ್ಥಾಪಕ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಪುತ್ತೂರು ಶಾಸಕ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರಣೆ ನೀಡಿದರು.
ಈ ಬಾರಿ 50000 ಮಂದಿಗೆ ವಸ್ತ್ರ ವಿತರಣೆ ಮತ್ತು ಸಹ ಭೋಜನ ನಡೆಯಲಿದ್ದು, ವ್ಯವಸ್ಥಿತವಾಗಿ ನಡೆಯಲು ಈಗಾಗಲೇ ಎಲ್ಲಾ ರೀತಿಯ ಪೂರ್ವ ಸಿದ್ಧತೆ ರೂಪುರೇಷೆ ನಡೆಸಲಾಗಿದೆ.
ಟ್ರಸ್ಟ್ ಮೂಲಕ ಬಡವರ ಶ್ರೇಯೋಭಿವೃದ್ಧಿಗಾಗಿ ವರ್ಷಂಪ್ರತಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ.
ಅಶಕ್ತರಿಗೆ ಮೆಡಿಕಲ್ ಕ್ಯಾಂಪ್, ಸುಶಿಕ್ಷಿತ ನಿರುದ್ಯೋಗಿಗಳಿಗೆ ಉದ್ಯೋಗ ತರಬೇತಿ, ಬಸ್ಸು ಚಾಲಕ, ಕಂಡಕ್ಟರ್, ಮೆಸ್ಕಾಂ ತರಬೇತಿ ಇನ್ನಿತರ ಸರಕಾರಿ ಉದ್ಯೋಗಗಳಿಗೆ ಪೂರಕವಾಗುವ ಮಾಹಿತಿ, ತರಬೇತಿಗಳು ಟ್ರಸ್ಟ್ ಮೂಲಕ ಅವ್ಯಾಹತವಾಗಿ ನಡೆಯುತ್ತಿದೆ.
13 ನವೆಂಬರ್, ಜೂ.ಕಾಲೇಜು ಮೈದಾನದಲ್ಲಿ ನಡೆಯುವ ವಸ್ತ್ರ ವಿತರಣೆ ಸಮಾರಂಭ ಅಂದಾಜು
1 ಕೋ.70 ಲಕ್ಷ ವೆಚ್ಚದಲ್ಲಿ ಬೆಳಿಗ್ಗೆ 9 ಗಂಟೆಯಿಂದ 5 ಗಂಟೆ ತನಕ ನಡೆಯಲಿದ್ದು, ಪುರುಷ, ಮಹಿಳೆ, ಮಕ್ಕಳಿಗೆ, ಹಾಗೂ ವಿಶೇಷ ಚೇತನರಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು
ಸಮಾರಂಭದಲ್ಲಿ ಒಡಿಯೂರು ಶ್ರೀ, ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಶೆಟ್ಟಿ, ಹರೀಶ್ ಕುಮಾರ್ ಇನ್ನಿತರ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಮಾಜದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡ ಸಾಮಾನ್ಯ ನಾಗರೀಕರನ್ನು ಸನ್ಮಾನಿಸಲಾಗುವುದು. ವಿಶೇಷ ಆಕರ್ಷಣೆಯಾಗಿ ಗೂಡುದೀಪ ಸ್ಪರ್ಧೆ ನಡೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರವರ್ತಕಿ ಸುಮ ಅಶೋಕ್ ರೈ, ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಮಾಧ್ಯಮ ವಕ್ತಾರ ಕೃಷ್ಣ ಪ್ರಸಾದ್ ಭಟ್ ಉಪಸ್ಥಿತರಿದ್ದರು.





