ಉಪ್ಪಿನಂಗಡಿ: ಅಂಗಡಿ, ಹೋಟೆಲ್, ಪೆಟ್ರೋಲ್ ಬಂಕ್ ಗಳಲ್ಲಿ ಸರಣಿ ಕಳ್ಳತನ: ಹಣ, ಬೆಲೆ ಬಾಳುವ ಸೊತ್ತು ಕದ್ದು ಪರಾರಿ
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಅಂಗಡಿ, ಹೋಟೆಲ್, ಪೆಟ್ರೋಲ್ ಬಂಕ್ ಗಳಲ್ಲಿ ಸರಣಿ ಕಳ್ಳತನ ನಡೆದಿರುವ ಘಟನೆ ಉಪ್ಪಿನಂಗಡಿ ಹಾಗೂ 34 ನೆಕ್ಕಿಲಾಡಿಯಲ್ಲಿ ನಡೆದಿದೆ. ಈ ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದೆ.
ಗಾಂಧಿ ಪಾರ್ಕ್ ಬಳಿಯ ಜಗದೀಶ್ ನಾಯಕ್ ಅವರ ಟೈಲ್ಸ್ ಅಂಗಡಿಯ ಶಟರ್ ಬೀಗ ಮುರಿದು ಕಳ್ಳರು ಒಳನುಗ್ಗಿ ಅಲ್ಲಿನ ಕ್ಯಾಶ್ ಡ್ರಾವರ್ ನಲ್ಲಿ ಇರಿಸಲಾಗಿದ್ದ ಸುಮಾರು 20,000 ರೂ. ಹಣವನ್ನು ಕಳ್ಳತನ ಮಾಡಿದ್ದಾರೆ. ಬಳಿಕ ಪಕ್ಕದ ಗುಜರಿ ಅಂಗಡಿಗೆ ನುಗ್ಗಿ ತಾಮ್ರದ ಬೆಲೆ ಬಾಳುವ ಸೊತ್ತುಗಳನ್ನು ಹೊತ್ತೊಯ್ದಿದ್ದಾರೆ. ನಂತರ ಅಲ್ಲೇ ಹತ್ತಿರವಿದ್ದ ಹೋಟೆಲೊಂದಕ್ಕೆ ನುಗ್ಗಿದ ಕಳ್ಳರು ಅಲ್ಲಿಯೂ ಇದ್ದ ಹಣವನ್ನು ಲಪಟಾಯಿಸಿದ್ದಾರೆ.
ಬಳಿಕ 34 ನೆಕ್ಕಿಲಾಡಿಯ ಭಾರತ್ ಪೆಟ್ರೋಲ್ ಬಂಕ್ ಗೆ ಕಳ್ಳರು ನುಗ್ಗಿ ಅಲ್ಲಿಯೂ ಸಹ ಹಣವನ್ನು ಕದ್ದಿದ್ದಾರೆ. ನಂತರ ಬೊಳ್ಳಾರ್ ಬಳಿಯ ರವೀಂದ್ರ ಪ್ರಭು ಅವರ ವೃಂದಾ ವೈಭವ್ ಗ್ಯಾಸ್ ಫಿಲ್ಲಿಂಗ್ ಸೆಂಟರ್ ನ ಎರಡು ಗಾಜಿನ ಬಾಗಿಲು ಒಡೆದು ಕಳ್ಳರು ಒಳನುಗ್ಗಿದ್ದು, ಕಳ್ಳರು ಒಡೆದು ಹಾಕಿರುವ ಗಾಜಿನ ಬಾಗಿಲಿನ ಮೌಲ್ಯ ಸುಮಾರು ಎರಡು ಲಕ್ಷ ರೂ. ಎನ್ನಲಾಗಿದೆ. ಬಳಿಕ ದೇವರ ಮಂಟಪಕ್ಕೆ ನುಗ್ಗಿದ ಕಳ್ಳರು ಅಲ್ಲಿದ್ದ ಬೆಳ್ಳಿಯ ಚೆಂಬು, ಹಣವನ್ನು ಕಳವುಗೈದಿದ್ದಾರೆ.





