ಕೊಣಾಜೆ: ಲಾರಿ, ಹಿಟಾಚಿ, ಜೆಸಿಬಿಗಳಿಂದ ಬ್ಯಾಟರಿ ಕಳವು ಪ್ರಕರಣ:
ಇಬ್ಬರು ಆರೋಪಿಗಳ ಬಂಧನ
ಕೊಣಾಜೆ: ಇಲ್ಲಿನ ಕುರ್ನಾಡು ಮಿತ್ತಕೋಡಿ ಸೈಟ್‌ನಲ್ಲಿ ನಿಲ್ಲಿಸಲಾಗಿದ್ದ ಲಾರಿ, ಹಿಟಾಚಿ ಹಾಗೂ ಜೆಸಿಬಿಗಳ 7 ಬ್ಯಾಟರಿಗಳನ್ನು ಕಳವುಗೈದ ಆರೋಪಿಗಳನ್ನು ಕೊಣಾಜೆ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಕಡಬ ತಾಲೂಕಿನ ಕುಂತೂರು ನಿವಾಸಿ ರಾಜೀಕ್ ಕೆ (27), ಬಂಟ್ವಾಳದ ಪಟ್ರಕೋಡಿಯ ಸಿನಾನ್ (24) ಎಂದು ಗುರುತಿಸಲಾಗಿದೆ. ಇವರಿಬ್ಬರು ಮಿತ್ತಕೋಡಿ ಸೈಟ್‌ನಲ್ಲಿ ನಿಲ್ಲಿಸಲಾಗಿದ್ದ ಲಾರಿ, ಹಿಟಾಚಿ ಹಾಗೂ ಜೆಸಿಬಿಗಳ 7 ಬ್ಯಾಟರಿಗಳನ್ನು ಕಳವುಗೈದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅಪರಾಧ ಸಿಬ್ಬಂದಿಗಳ ತಂಡ ರಚಿಸಿ ಆರೋಪಿಗಳ ಪತ್ತೆಗಾಗಿ ಶೋಧಕಾರ್ಯ ನಡೆಸುತ್ತಿದ್ದರು.
ಆರೋಪಿಗಳು ಟಾಟಾ ಎಸ್ ವಾಹನದಲ್ಲಿ ಕದ್ದೊಯ್ದ ಬ್ಯಾಟರಿಗಳನ್ನು ತೆಗೆದುಕೊಂಡು ಮಾರಾಟ ಮಾಡಲು ಬರುತ್ತಿದ್ದಾರೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಕೊಣಾಜೆ ಪೊಲೀಸ್ ಠಾಣಾ ತನಿಖಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ ಅವರು ಸಿಬ್ಬಂದಿಗಳ ಜೊತೆಗೆ ಬಾಣೆಪುಣಿ ಗ್ರಾಮದ ಸುಟ್ಟಾಡಿ ಕ್ರಾಸ್ ನಲ್ಲಿ ಕಾಯುತ್ತಿದ್ದ ಸಂದರ್ಭ ಮೂಳೂರು ಕಡೆಯಿಂದ ಟಾಟಾ ಎಸ್ ವಾಹನ ಬರುತ್ತಿರುವುದು ಕಂಡುಬಂದಿದ್ದು, ಈ ವೇಳೆ ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿದ ಸಂದರ್ಭ ಅದರಲ್ಲಿ 10 ಬ್ಯಾಟರಿಗಳು ಪತ್ತೆಯಾಗಿದೆ.





