ನಟಿ ನಿಖಿತಾ ದತ್ತಾ ಮೊಬೈಲ್ ಫೋನ್ ಅನ್ನು ಕಿತ್ತುಕೊಂಡು ಪರಾರಿಯಾದ ಅಪರಿಚಿತರು

ಮುಂಬೈ: ಬಾಲಿವುಡ್ ಹಾಗೂ ಕಿರುತೆರೆ ನಟಿ ನಿಖಿತಾ ದತ್ತಾ ಅವರ ಮೊಬೈಲ್ ಫೋನ್ ಅನ್ನು ಅಪರಿಚಿತರು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದಾರೆ.
ಸೋಮವಾರ ರಾತ್ರಿ ಬಾಂದ್ರಾದಲ್ಲಿ ಈ ಘಟನೆ ನಡೆದಿದೆ. ‘ರಾತ್ರಿ 7.30ರ ಸುಮಾರಿಗೆ ಬಾಂದ್ರಾ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬೈಕ್‌ನಲ್ಲಿ ಬಂದ ಅಪರಿಚಿತರು ನನ್ನ ತಲೆಗೆ ಹೊಡೆದರು. ಬಳಿಕ ಎರಡು–ಮೂರು ಸೆಕೆಂಡ್‌ಗಳಲ್ಲಿ ಕೈಯಲ್ಲಿ ಇದ್ದ ಮೊಬೈಲ್ ಫೋನ್ ಅನ್ನು ಕಿತ್ತುಕೊಂಡು ಪರಾರಿಯಾದರು’ ಎಂದು ದೂರಿದ್ದಾರೆ.
ಈ ಸಮಯದಲ್ಲಿ ಸ್ಥಳೀಯರು ಸೇರಿದಂತೆ ಸ್ವೀಟ್ ಅಂಗಡಿ ಮಾಲೀಕರು ಸಹಾಯಕ್ಕೆ ಬಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಅವರು ವೇಗವಾಗಿ ಬೈಕ್‌ನಲ್ಲಿ ಪರಾರಿಯಾದರು ಎಂದು ನಿಖಿತಾ ಹೇಳಿದ್ದಾರೆ.
ಮೊಬೈಲ್ ಕದ್ದ ಸಂಬಂಧ ನಿಖಿತಾ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪ್ರಕರಣದ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ನಿಖಿತಾ ಅವರು ಫೋನ್ ಕಳುವಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಭಿಮಾನಿಗಳು ಸೇರಿದಂತೆ ಆಪ್ತರು ಹಾಗೂ ಗೆಳೆಯರು ಅವರಿಗೆ ಸಮಾಧಾನ ಹೇಳಿದ್ದಾರೆ.