ಮಂಗಳೂರು ಕಾರ್ ಹಿಟ್ ಅಂಡ್ ರನ್ ಕೇಸ್:
ಓರ್ವ ಯುವತಿ ಮೃತ್ಯು, ನಾಲ್ವರು ಗಂಭೀರ..!
ಮಂಗಳೂರು: ನಗರದಲ್ಲಿ ಬುಧವಾರ ಸಂಜೆ ನಡೆದ ಕಾರಿನ ಭೀಕರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಯುವತಿಯೋರ್ವಳು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದರೆ ಉಳಿದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ನಗದ ಲೇಡಿ ಹಿಲ್ ಮಣ್ಣಗುಡ್ಡ ಮುಖ್ಯ ರಸ್ತೆಯ ಈಜುಕೊಳ ಮುಂಭಾಗದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ಯುವತಿಯನ್ನು ಸುರತ್ಕಲ್ ಬಾಳದ ರೂಪಶ್ರೀ (23) ಎಂದು ಗುರುತಿಸಲಾಗಿದೆ. ಸ್ವಾತಿ(26) ಹಿತಾನ್ವಿ(16), ಕೃತಿಕಾ(16), ಯತಿಕಾ912) ಗಂಭೀರ ಗಾಯಗೊಂಡ ಇತರ ನಾಲ್ವರು ಯುವತಿಯರಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬುಧವಾರ ಅಪರಾಹ್ನ ನಾಲ್ಕು ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಹುಂಡೈ ಇಯೋನ್ ಗಾಡಿ ಸಂಖ್ಯೆKA 19 MD 5676 ನೋಂದಣಿ ಹೊಂದಿದ್ದ ಕಾರು ಮಣ್ಣಗುಡ್ಡ ಕಡೆಯಿಂದ ಲೇಡಿಹಿಲ್ ಕಡೆಗೆ ಅತೀ ವೇಗ ಮತ್ತು ನಿರ್ಲಕ್ಷ್ಯದ ದ ಚಾಲನೆಯೊಂದಿಗೆ ಬಂದಿದ್ದು, ಎಸ್ ಎಲ್ ಶೇಟ್ ಜ್ಯುವೆಲ್ಲರಿ ಬಳಿ ಫುಟ್ ಪಾತಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರ ಮೇಲೆ ಚಾಲಕ ಕಾರು ಹಾರಿಸಿಕೊಂಡು ಹೋಗಿದ್ದಾನೆ.
ಅಪಘಾತ ನಡಸಿದ ಬಳಿಕ ಸ್ಥಳದಿಂದ ಕಾರು ಸಮೇತ ಪರಾರಿಯಾಗಿದ್ದ ಚಾಲಕ ಕಮಲೇಶ್ ಬಲದೇವ್ ಕಾರನ್ನು ಹೋಂಡಾ ಶೋ ರೂಂ ಬಳಿ ನಿಲ್ಲಿಸಿ ಮನೆಗೆ ಹೋಗಿದ್ದಾನೆ. ಬಳಿಕ ತಂದೆ ಹೆಚ್‌ಎಂ ಬಲದೇವ್ ಅವರೊಂದಿಗೆ ಪಶ್ಚಿಮ ಸಂಚಾರಿ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ. ಅಪಘಾತ ಭೀಕರ ದೃಶ್ಯ ಸ್ಥಳೀಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.




