ವಾಷಿಂಗ್ಟನ್: ಆಕ್ಸ್‌ಫರ್ಡ್ ಪ್ರೌಢಶಾಲೆಯಲ್ಲಿ ಗುಂಡಿನ ದಾಳಿ: ಮೂವರು ವಿದ್ಯಾರ್ಥಿಗಳು ಮೃತ್ಯು
ವಾಷಿಂಗ್ಟನ್: ಮಿಚಿಗನ್ ಗ್ರಾಮೀಣ ಪ್ರದೇಶದ ಆಕ್ಸ್‌ಫರ್ಡ್ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ 15 ವರ್ಷದ ಶಾಲಾ ವಿದ್ಯಾರ್ಥಿಯೊಬ್ಬ ಗುಂಡು ಹಾರಿಸಿದ್ದು, ಮೂವರು ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ. ಸದ್ಯ ಆತನನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಉತ್ತರ ಡೆಟ್ರಾಯ್ಟ್ ನಗರದಲ್ಲಿ ನಡೆದ ಘಟನೆಯಲ್ಲಿ ಶಿಕ್ಷಕರೊಬ್ಬರು ಸೇರಿದಂತೆ ಆರು ಜನರು ಗಾಯಗೊಂಡಿದ್ದಾರೆ ಎಂದು ಓಕ್ಲಾಂಡ್ ಕಂಟ್ರಿಯ ಕಾನೂನು ಜಾರಿ ಕಚೇರಿ (ಷೆರಿಫ್ ಕಚೇರಿ) ಹೇಳಿಕೆಯಲ್ಲಿ ತಿಳಿಸಿದೆ.
ಘಟನೆ ಸಂಬಂಧ ದ್ವಿತೀಯ ವರ್ಷದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದು, ಬಂದೂಕನ್ನು ಜಪ್ತಿ ಮಾಡಲಾಗಿದೆ. ಘಟನೆಗೆ ನಿಖರ ಕಾರಣವೇನೆಂದು ಸದ್ಯ ತಿಳಿದುಬಂದಿಲ್ಲ.
ಆರೋಪಿ ಬಾಲಕನ ಬಂಧನದ ವೇಳೆ ಯಾವುದೇ ಪ್ರತಿರೋಧ ವ್ಯಕ್ತವಾಗಿಲ್ಲ ಮತ್ತು ಘಟನೆಗೆ ಕಾರಣವೇನೆಂದು ಕೂಡ ಹೇಳಿಲ್ಲ ಎಂದು ಷೆರಿಫ್ ಕಚೇರಿ ತಿಳಿಸಿದೆ.
‘ಇದು ತೀವ್ರ ಆಘಾತಕಾರಿ’. ಘಟನೆಯಲ್ಲಿ ಮೂವರು ಸಾವಿಗೀಡಾಗಿದ್ದು, ಅವರೆಲ್ಲರೂ ವಿದ್ಯಾರ್ಥಿಗಳಾಗಿದ್ದಾರೆ. ಘಟನೆಯಿಂದ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ’ ಎಂದು ಕಚೇರಿಯ ಮೈಕಲ್ ಮ್ಯಾಕೇಬ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ಘಟನೆ ನಡೆದ ಕೂಡಲೇ 911ಗೆ ನೂರಕ್ಕೂ ಹೆಚ್ಚು ತುರ್ತು ಕರೆಗಳು ಬಂದಿವೆ ಮತ್ತು ವಿದ್ಯಾರ್ಥಿಯು ಸೆಮಿ ಆಟೋಮ್ಯಾಟಿಕ್ ಹ್ಯಾಂಡ್‌ಗನ್‌ನಿಂದ 5 ನಿಮಿಷದಲ್ಲಿ 15-20 ಬಾರಿ ಗುಂಡು ಹಾರಿಸಿದ್ದಾನೆ. ಕರೆ ಬಂದ 5 ನಿಮಿಷದಲ್ಲೇ ಆರೋಪಿ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.