ಪಾಶ್ಚಾತ್ಯ ಬಳುವಳಿಗಳ ತಳಮಳ: ವಿಶೇಷ ಲೇಖನ: ರಾಧಾಕೃಷ್ಣ ಎರುಂಬು.
ನಾವು ಭಾರತೀಯರೆಂದು ಹೆಮ್ಮೆಯಿಂದ ಹೇಳುತ್ತೇವೆ. ವಿಭಿನ್ನ ಭಾಷೆ, ಭಿನ್ನಜನ, ವಿವಿಧ ಸಂಸ್ಕೃತಿ, ಹಲವು ಜಾತಿ ಮತ, ಹೆಚ್ಚಾಗಿ ಪೂರ್ಣ ಪ್ರಜಾಪ್ರಭುತ್ವ ಹೊಂದಿದವರೆಂದೂ ಬೀಗುತ್ತೇವೆ.ಅವಿದ್ಯಾವಂತರನ್ನು ವಿದ್ಯಾವಂತರನ್ನಾಗಿಸುವ, ಬಡವರನ್ನು ಸಿರಿವಂತರನ್ನಾಗಿಸುವ, ಹಳ್ಳಿಗಳನ್ನು ಆಧುನಿಕತೆಯತ್ತ ವಾಲಿಸುವ ಪ್ರಯತ್ನ ಸರಕಾರವು ಸೇರಿ, ಆರ್ಥಿಕತೆಯಲ್ಲಿ ಬಲವಿರುವ ಸಂಸ್ಥೆಗಳಿಂದ ನಡೆಯುತ್ತಲೇ ಇದೆ. ಅಲ್ಲಿ ಸಫಲತೆಯನ್ನೂ ಕಂಡಿದ್ದೇವೆ. ಸುಧಾರಿತ ಬದುಕು, ಉದ್ಯೋಗ, ಗಳಿಕೆಯ ದಾರಿ ತೋರಿ ಧನ ಸಂಪಾದನೆ ಮಾಡಿಕೊಟ್ಟಿದೆ ಎನ್ನುವುದೂ ಪ್ರಶಂಸನೀಯ. “ಉಪ್ಪರಿಗೆ ಮನೆಯವರಾದರೂ ಉಪ್ಪಿಲ್ಲದೆ ಉಣ್ಣಲಾರರು”. ಈ ನೆಲೆಯಲ್ಲಿ ಅನ್ನದಾತರ ವಿರಳತೆಯಿಂದ ಹಣವನ್ನೇ ತಿನ್ನಬೇಕೆ? ಎಂಬ ಪ್ರಶ್ನೆ ದೂರದಲ್ಲೊಂದು ಭಯದ ಸೂಚನೆಯನ್ನು ಮತ್ತೆ ಮತ್ತೆ ತೋರಿಸುತಿದೆ. ರೈತನಿಲ್ಲದ ದೇಶದ ಕಲ್ಪನೆ ಊಹಿಸಲು ಸಾಧ್ಯವೇ? ಹೇಳಿ. ಆಹಾರಕ್ಕಾಗಿ ಪರ ದೇಶದ ಅವಲಂಬನೆ ಅಬ್ಬಾ…. ಆ ದಿನ ಬರುವುದೇ ಬೇಡ ಅನಿಸುತ್ತದೆ.
ನಮ್ಮ ಜನರ ಅಂದಿನ ಬದುಕಿನ ಸೌಂದರ್ಯ ನೆಮ್ಮದಿ, ತ್ಯಾಗ, ಶಾಂತಿ, ಆರೋಗ್ಯಕರ, ಬದುಕಿನದ್ದಾಗಿತ್ತೇ ಹೊರತು ಈಗಿನ ಸ್ಥಿತಿಯಂತೆ ಕಿತ್ತು ತಿಂದು ಇನ್ನೊಬ್ಬರ ನೋವಿಗೆ ಹೇತುವಾಗಿರಲಿಲ್ಲ. ಐಶಾರಾಮದ ಬದುಕಿನ ಶೈಲಿ ಪಾಶ್ಚಾತ್ಯರಿಂದ ನಾವು ಕಲಿತುಕೊಂಡ ಬಳುವಳಿಗಳಷ್ಟೆ. ಪಾಶ್ಚಿಮಾತ್ಯ ಬದುಕಲ್ಲಿ ನಾನು ನನ್ನದು ಮಾತ್ರ ಸಾಕೆಂಬ ಸತ್ವಹೀನತೆ ಕಾಣುತಿದೆಯಲ್ಲವೇ? ರಸಭರಿತ ಸಂಬಂಧದ ಬದುಕೆಲ್ಲಿದೆ ಎಂಬುದೇ ಆತಂಕ.ಕೃಷಿ ಅವಲಂಬಿತ ಅವಿಭಕ್ತ ಕುಟುಂಬ ಹೊಂದಿರುವ ಭಾರತದ ಪವಿತ್ರ ಸನಾತನತೆಗೆ ಬಲಕೊಟ್ಟಿರುವುದು ಸತ್ಯ-ಧರ್ಮದ ಮೇಲೆ ಇಟ್ಟಿರುವ ನಂಬಿಕೆಯಿಂದ. ನಮ್ಮ ಸುಸಂಸ್ಕೃತ ಮನಸ್ಸುಗಳು ಪರ ದೇಶದ ರಿಯಲ್, ಧಿರಂ, ಡಾಲರ್ ಮುಂತಾದವುಗಳ ದಾಹಕ್ಕೆ ಸಿಲುಕಿ ಸ್ವದೇಶದ ಜ್ಞಾನವನ್ನು ಮಾರಿ ಪರಾವಲಂಬನೆಯ ದಾರಿ ತುಳಿದ ಸನ್ನಿವೇಶ ವಿದ್ರಾವಕ. ಧನ ಸಂಪಾದನೆಗಾಗಿ ಪರ ದೇಶದ ನಿತ್ಯಕರ್ಮಗಳು ಆಧುನಿಕತೆಯೆಂದು ನಮ್ಮ ಶುದ್ಧ ಕರ್ಮವನ್ನು ಮೂಲೆಗೆಸೆದಿವೆ.ನಮ್ಮ ಸ್ವಚ್ಛ ಕರ್ಮವನ್ನು ಅನ್ಯ ದೇಶಿಯರು ಕಾಯ್ದುಕೊಂಡರು. ನಮ್ಮವರು ಅಲ್ಲಿ “ಹೊಟ್ಟೆಗಾಗಿ ಗೇಣುಬಟ್ಟೆಗಾಗಿ” ಎಂದು ಅರೆಹೊಟ್ಟೆಯಿಂದಿದ್ದು , ತನ್ನ ಸಂಸಾರಿಕ ಬದುಕನ್ನು ವರ್ಷಗಟ್ಟಲೆ ತ್ಯಾಗ ಮಾಡಿದ ಸಂಕಟಗಳನ್ನು ರವಾನಿತ ಧನ-ಕನಕಗಳು ಮರೆ ಮಾಚಿಸಿವೆ. ಇದೆಲ್ಲ ಪ್ರತಿಫಲ ಅನುಭವಿಸುವವರಿಗೆ ಅರಿವಿಲ್ಲ.
24 ಗಂಟೆಗಳನ್ನೂ ಇತರರಿಗಾಗಿ ದುಡಿದು, ಆಹಾರ ಪದ್ಧತಿಯಲ್ಲಿನ ಬದಲಾವಣೆಗಳನ್ನು ಅಪ್ಪಿ , ವಿದೇಶಿಯ ಪದ್ದತಿಯ ಜೀವನ ಶೈಲಿಯನ್ನು ಒಪ್ಪಿ , ಸಂಸಾರ ಸಾರ ಮರೆತ ದೀರ್ಘಕಾಲಿಕ ಜೀವನವನ್ನು ತಬ್ಬಿ ,ಆರೋಗ್ಯ ಹಾಳು ಮಾಡಿ, ಮುಗಿದ ಆಯುಸ್ಸಿನೊಂದಿಗೆ ಅನಾಮಿಕನಾಗಿ ಬದುಕಬೇಕಾದ ಸ್ಥಿತಿ ವಿದೇಶದಲ್ಲಿ ಬದುಕುತಿರುವ ನಮ್ಮವರದು.
ಇವೆಲ್ಲದರ ಮದ್ಯೆ ಇತ್ತೀಚೆಗೆ ನಡೆಯುತ್ತಿರುವ ಯುದ್ಧ ಭೀತಿ ಕೇಳಿದಾಗಲೇ ಮೈ ಜುಮ್ಮೆನ್ನುತ್ತದೆ. ಪಶ್ಚಿಮ ದೇಶಗಳ ಜೀವನ ಶೈಲಿ, ನಿಯಮಿತ ಆಹಾರ ಪದ್ಧತಿಯಿಲ್ಲದ ಬದುಕು ಆರೋಗ್ಯದ ಮೇಲೆ ತರುವ ಸಮಸ್ಯೆಗಳು ಬಳುವಳಿಗಳೇ.
ವಿದೇಶದ ಗಳಿಕೆ ದೇಶಿಯ/ ರಾಷ್ಟ್ರೀಯ ವರಮಾನಗಳ ಮೇಲೆ, ದೊಡ್ಡ ಕೊಡುಗೆ ನೀಡಿದೆ. ವಿದೇಶಿ ವ್ಯಾಪಾರ ಲಾಭದ ಮೇಲೆ ಸಪರಿಣಾಮ ಬೀರಿ, ವಿದೇಶದಲ್ಲಿ ಸಂಪಾದಿಸುವವರ ಹಾಗೂ ಅವರ ಆಶ್ರಿತ ಜನರ ಐಷರಾಮದ ಬದುಕು ಬಾಲರಿಂದ ಮುದುಕರ ವರೆಗೂ ಸೋಮಾರಿತನ, ಅನಾರೋಗ್ಯ,ಅಹಿತಕರ ಚಟುವಟಿಕೆಗಳನ್ನು ಬಳುವಳಿಯಾಗಿ ನೀಡಲ್ಪಟ್ಟಿದೆ ಎಂದರೂ ತಪ್ಪಿಲ್ಲ.
ಇವೆಲ್ಲದ್ದಕ್ಕೆ ಕಡಿವಾಣ ಮಾಡಬೇಕಿದ್ದರೆ ನಾವೆಲ್ಲ ಓದಿದಂತೆ ನಮ್ಮವರ ಸಂಪನ್ಮೂಲ ನಮ್ಮ ದೇಶದಲ್ಲೇ ವಿನಿಯೋಗವಾಗಬೇಕು. ವಿದೇಶದಂತೆ ಉತ್ತಮ ಪ್ರತಿಫಲ, ತಂತ್ರಜ್ಞಾನಯುಕ್ತ ಕೆಲಸ ನಮ್ಮವರ ಬದುಕನ್ನು ಭಾರತದಲ್ಲೇ ಮಾಡುವಂತೆ ಮಾಡಿದರೆ ಉತ್ತಮ.ನಮ್ಮವರು ನಮ್ಮತನ ಉಳಿಸುವ ಭಾರತದ ಕೃಷಿ ಬದುಕು ಮತ್ತೆ ಸುಧಾರಿಸಬಹುದೇ? ಮತ್ತೆ ಸತ್ವಯುತ ಅವಿಭಕ್ತ ಜೀವನ ಶೈಲಿ ಕಾಣಬಹುದೇ ಎಂಬ ಕಾತರವಿದೆ.



