ಕಾರು ನದಿಗೆ ಬಿದ್ದು ಇಬ್ಬರು ವೈದ್ಯರು ಮೃತ್ಯು
ಎರ್ನಾಕುಲಂ: ಕಾರು ನದಿಗೆ ಬಿದ್ದು ಇಬ್ಬರು ವೈದ್ಯರು ಅಸುನೀಗಿದ ಘಟನೆ ಕೇರಳ ರಾಜ್ಯದ ಎರ್ನಾಕುಲಂನ ಗೊತ್ತುರುತ್ ಪ್ರದೇಶದಲ್ಲಿ ರವಿವಾರ ನಡೆದಿದೆ. ಕಾರಿನಲ್ಲಿದ್ದ ಮತ್ತೆ ಮೂವರನ್ನು ಸ್ಥಳೀಯರು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಭಾರೀ ಮಳೆ ಮತ್ತು ಗೂಗಲ್ ಮ್ಯಾಪ್ ನಲ್ಲಿ ತಪ್ಪು ದಿಕ್ಕು ತೋರಿಸಿದ್ದು ಅಪಘಾತಕ್ಕೆ ಕಾರಣವಾಯಿತು.ಹೀಗಾಗಿ ಕಾರು ರಸ್ತೆಯಿಂದ ನದಿಗೆ ಧುಮುಕಿದೆ.
ಮೃತರನ್ನು ಕೊಲ್ಲಂನ ಅದ್ವೈತ್ ಮತ್ತು ಕೊಡುಂಗಲ್ಲೂರಿನ ಅಜ್ಮಲ್ ಎಂದು ಗುರುತಿಸಲಾಗಿದೆ. ಇಬ್ಬರೂ 28 ವರ್ಷ ವಯಸ್ಸಿನವರಾಗಿದ್ದು ಕೊಡುಂಗಲ್ಲೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.
ವೈದ್ಯ ಖಾಸಿಕ್ ಕಬೀರ್, ನರ್ಸಿಂಗ್ ವಿದ್ಯಾರ್ಥಿ ಜಿಸ್ಮನ್ ಮತ್ತು ಮೆಡಿಕಲ್ ವಿದ್ಯಾರ್ಥಿ ತಮನ್ನ ಅವರನ್ನು ರಕ್ಷಣೆ ಮಾಡಲಾಗಿದೆ. ಅವರ ಸ್ಥಿತಿ ಸಹಜವಾಗಿದೆ ಎಂದು ವರದಿಯಾಗಿದೆ.




