ಕೊಪ್ಪಳ ಜಿಲ್ಲೆ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಆಹಾರ ಸ್ವೀಕರಿಸಿದ ಮಕ್ಕಳ ಅಸ್ವಸ್ಥತೆ:
ತನಿಖೆಗೆ ಸಚಿವ ಕೋಟ ಆದೇಶ
ಬೆಂಗಳೂರು: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 20ಕ್ಕೂ ಹೆಚ್ಚಿನ ಮಕ್ಕಳು ಬೆಳಗ್ಗಿನ ಉಪಹಾರ ಸ್ವೀಕರಿಸಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಘಟನೆಯ ಬಗ್ಗೆ ತಕ್ಷಣ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರ ಮೂಲಕ ತನಿಖೆ ನಡೆಸಲು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಮೌಖಿಕ ಆದೇಶ ನೀಡಿದ್ದಾರೆ.
ಕೊಪ್ಪಳ ಜಿಲ್ಲಾಧಿಕಾರಿಗಳ ಬಳಿ ದೂರವಾಣಿ ಮೂಲಕ ಸಮಗ್ರ ಮಾಹಿತಿ ಪಡೆದ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಯಾವುದೇ ಪರಿಸ್ಥಿತಿಯಲ್ಲೂ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡಬೇಕೆಂದು, ಮುಂದೆ ಇಂತಹ ಘಟನೆ ನಡೆಯದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಾಗೂ ತಪ್ಪಿತಸ್ಥರು ಸೇರಿದಂತೆ ಭಾಗಿಯಾದ ಎಲ್ಲರ ಮೇಲೂ ತಕ್ಷಣ ಕ್ರಮ ಕೈಗೊಳ್ಳಲು ಮೌಖಿಕ ಆದೇಶವನ್ನು ಹೊರಡಿಸಿದ್ದಾರೆ.