ಬೆಳ್ತಂಗಡಿ: ಕ್ಷಮೆ ಕೇಳದಿದ್ದರೆ ಕಟೀಲ್ ಕಾರ್ಯಕ್ರಮಕ್ಕೆ ಘೇರಾವ್:
ಯುವ ಕಾಂಗ್ರೆಸ್ ಬೆಳ್ತಂಗಡಿ ತಾಲೂಕು ಘಟಕ ಎಚ್ಚರಿಕೆ
ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ಉನ್ನತ ನಾಯಕ ರಾಹುಲ್ ಗಾಂಧಿಯವರ ಬಗ್ಗೆ ಡ್ರಗ್ ಪೆಡ್ಲರ್ ಎಂದು ಹೇಳಿಕೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾನಸಿಕ ರೋಗಿ ಎಂಬುದನ್ನು ಸೂಚಿಸುತ್ತದೆ ಎಂದು ಯುವ ಕಾಂಗ್ರೆಸ್ ಬೆಳ್ತಂಗಡಿ ತಾಲೂಕು ಸಮಿತಿ ಟೀಕಿಸಿದೆ.
ರಾಷ್ಟ್ರೀಯ ಪಕ್ಷವಾದ ಬಿಜೆಪಿ ರಾಜ್ಯಾಧ್ಯಕ್ಷ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು , ಅವರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಅಗತ್ಯವಿದೆ. ಗುಜರಾತಿನ ಅದಾನಿ ಬಂದರಿನಲ್ಲಿ 3000 ಕೆಜಿ ಗ್ರಡ್ ಪತ್ತೆಯಾದರೂ ಬಾಯಿ ಮುಚ್ಚಿಕೊಂಡಿದ್ದ ನಳಿನ್ ಕುಮಾರ್ ಇದೀಗ ಮಾದಕ ವ್ಯಸನಿಯಂತೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬಾಯಿ ಬಿಟ್ಟರೆ ಸಂಸ್ಕಾರ, ಸಂಸ್ಕೃತಿ ಬಗ್ಗೆ ಬೊಬ್ಬಿಡುವ ಬಿಜೆಪಿಗರ ಸಂಸ್ಕಾರ, ಸಂಸ್ಕೃತಿ ನಳಿನ್ ಕುಮಾರ್ ಅವರ ಮಾತಿನ ಮೂಲಕ ಜಗಜ್ಜಾಹೀರು ಆಗಿದೆ ಎಂದು ವ್ಯಂಗ್ಯವಾಡಿರುವ ಯುವ ಕಾಂಗ್ರೆಸ್ ಬೆಳ್ತಂಗಡಿ ನಗರ ಬ್ಲಾಕ್ ಅಧ್ಯಕ್ಷ ಅನಿಲ್ ಪೈ, ನಳಿನ್ ಕುಮಾರ್ ಅವರು ತಕ್ಷಣವೇ ರಾಹುಲ್ ಗಾಂಧಿಯವರಲ್ಲಿ ಬಹಿರಂಗ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದು, ಇಲ್ಲದಿದ್ದರೆ ಬೆಳ್ತಂಗಡಿ ತಾಲೂಕಿನಾದ್ಯಂತ ಕಟೀಲ್ ಅವರ ಕಾರ್ಯಕ್ರಮಕ್ಕೆ ಯುವ ಕಾಂಗ್ರೆಸ್ ಕಾರ್ಯಕರ್ತರು ಘೆರಾವ್ ಹಾಕಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.