ಮಂಗಳೂರು: ಹಲವು ಪ್ರಕರಣಗಳ ಆರೋಪಿ ವಿಟ್ಲದ ಬ್ಲೇಡ್ ಸಾಧಿಕ್ ನ ಬಂಧನ: 2.50 ಲಕ್ಷ ರೂ. ಮೌಲ್ಯದ ಮಾದಕ ವಸ್ತು ವಶಕ್ಕೆ
ಮಂಗಳೂರು : ನಗರ ಹಾಗೂ ಕೇರಳ ರಾಜ್ಯಕ್ಕೆ ಮಾದಕ ವಸ್ತುವಾದ ಎಂಡಿಎಂಎ ಮಾರಾಟ ಮಾಡುತ್ತಿದ್ದ ಕುಖ್ಯಾತ ಆರೋಪಿ ಬಂಟ್ವಾಳ ಕೊಡಂಗಾಯಿ ನಿವಾಸಿ ಹಸನ್ ಸಾದಿಕ್ ಯಾನೆ ಬ್ಲೇಡ್ ಸಾದಿಕ್(35) ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಈತ ಬೆಂಗಳೂರಿನಿಂದ ಎಂಡಿಎಂಎ ಮಾದಕ ವಸ್ತುವನ್ನು ಖರೀದಿಸಿಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ಮಾರುತಿ 800 ಕಾರಿನಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ . ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಈತನಿಂದ ಒಟ್ಟು 50 ಗ್ರಾಂ ತೂಕದ 2,50,000 ರೂಪಾಯಿ ಮೌಲ್ಯದ ಎಂಡಿಎಂಎ ಮಾದಕ ವಸ್ತು, ಮಾರುತಿ 800 ಕಾರು, ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 3,65,500 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮಾದಕ ವಸ್ತು ಮಾರಾಟ ಜಾಲದ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ.
ಆರೋಪಿ ಹಸನ್ ಸಾದಿಕ್ ಯಾನೆ ಬ್ಲೇಡ್ ಸಾದಿಕ್ ಎಂಬಾತನ ವಿರುದ್ಧ ಈ ಹಿಂದೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಒಟ್ಟು 8 ಹಲ್ಲೆ, ಬೆದರಿಕೆ ಪ್ರಕರಣಗಳು, 4 ಕೊಲೆ ಯತ್ನ ಪ್ರಕರಣ, ಪುತ್ತೂರು ನಗರ ಠಾಣೆಯಲ್ಲಿ 2 ಕೊಲೆ ಯತ್ನ ಪ್ರಕರಣ,ಉಪ್ಪಿನಂಗಡಿ ಠಾಣೆಯಲ್ಲಿ ಮಾನಭಂಗ ಹಾಗೂ ಕಿಡ್ನಾಫ್ ಪ್ರಕರಣ, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಹಲ್ಲೆ ಪ್ರಕರಣ, ಕಾವೂರು ಪೊಲೀಸ್ ಠಾಣೆಯಲ್ಲಿ ದರೋಡೆಗೆ ಯತ್ನ ಪ್ರಕರಣ, ಬೆಂಗಳೂರು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟ ಹೀಗೆ ಒಟ್ಟು 17 ಪ್ರಕರಣಗಳು ದಾಖಲಾಗಿದೆ.
ಈತನು ಸುಮಾರು 6 ತಿಂಗಳಿನಿಂದ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ವಿಚಾರಣೆ ಸಮಯ ಹಾಜರಾಗದೇ ತಲೆಮರೆಸಿಕೊಂಡಿದ್ದು, ಈತನ ವಿರುಧ್ದ ನ್ಯಾಯಾಲಯವು ವಾರಂಟ್ ಹೊರಡಿಸಲಾಗಿತ್ತು.




