ಉಪ್ಪಿನಂಗಡಿ: ಇಲೆಕ್ಟ್ರಿಕಲ್, ಹಾರ್ಡ್‍ವೇರ್ ಮಳಿಗೆಗೆ ನುಗ್ಗಿದ ಕಳ್ಳರು ನಗದು ಸೇರಿ 15.7 ಲಕ್ಷದ ಸೊತ್ತುಗಳ ಕಳವು
ಉಪ್ಪಿನಂಗಡಿ: ಜಗದಾಂಭ ಏಜೆನ್ಸಿ ಎಂಬ ಎಲೆಕ್ಟ್ರಿಕಲ್ ಮತ್ತು ಹಾರ್ಡ್‍ವೇರ್ ಮಳಿಗೆಗೆ ನುಗ್ಗಿದ ಕಳ್ಳರು ಎರಡು ಲಕ್ಷ ರೂ. ನಗದು ಸೇರಿದಂತೆ ಸುಮಾರು 15.7 ಲಕ್ಷದ ಸೊತ್ತುಗಳನ್ನು ಕಳವು ಮಾಡಿದ ಘಟನೆ ನೆಲ್ಯಾಡಿಯಲ್ಲಿ ಗುರುವಾರ ಬೆಳಕಿಗೆ ಬಂದಿದೆ.
ಪ್ರಕಾಶ್ ಕೆ.ಜೆ. ಮಾಲಿಕತ್ವದ ಕಟ್ಟಡದಲ್ಲಿ ರಾಜಸ್ಥಾನದ ನಿವಾಸಿ ಕರಣ್ ಪಾಲ್ ಎಂಬವರ ಸಹೋದರನಿಗೆ ಸೇರಿದ ಎಲೆಕ್ಟ್ರಿಕಲ್ ಮತ್ತು ಹಾರ್ಡ್‍ವೇರ್ ಮಳಿಗೆಯಲ್ಲಿ ಕಳವು ಆಗಿದೆ.
ಈ ಅಂಗಡಿಯ ಶಟರ್ ಅನ್ನು ಕತ್ತರಿಸಿ, ಒಳಗಡೆ ನುಗ್ಗಿರುವ ಕಳ್ಳರು ಕ್ಯಾಶ್ ಡ್ರವರ್ ನಲ್ಲಿದ್ದ ಎರಡು ಲಕ್ಷ ರೂಪಾಯಿಯನ್ನು ದೋಚಿದ್ದಲ್ಲದೆ, ಕೆಲವು ಸಾಮಗ್ರಿಗಳು ಹಾಗೂ ಅಂಗಡಿಯ ಒಳಗೆ ಇದ್ದ ಸಿಸಿ ಕ್ಯಾಮರಾದ ಡಿವಿಆರ್ ಅನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಆ.17ರಂದು ಬೆಳಗ್ಗೆ ಕರಣ್‍ಪಾಲ್ ಅವರ ಭಾವ ಪ್ರೇಮ್ ಸಿಂಗ್ ಅಂಗಡಿಯ ಬಾಗಿಲು ತೆರೆಯಲು ಹೋದಾಗ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.
ನಗದು ಸೇರಿದಂತೆ ಒಟ್ಟು ಹದಿನೈದು ಲಕ್ಷದ ಏಳು ಸಾವಿರ ರೂ. ಮೌಲ್ಯದ ಸೊತ್ತನ್ನು ಕಳವುಗೈಯಲಾಗಿದೆ ಎಂದು ತಿಳಿಸಿದ್ದಾರೆ.
ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.





