ಅಕ್ರಮವಾಗಿ ಶಸ್ತ್ರಾಸ್ತ್ರ ತರಬೇತಿ ಶಿಬಿರ: ಬಜರಂಗದಳದ ಕಾರ್ಯಕರ್ತರ ಬಂಧನ
ಗುವಾಹಟಿ: ಅಕ್ರಮ ಶಸ್ತ್ರಾಸ್ತ್ರ ತರಬೇತಿ ಶಿಬಿರ ಆಯೋಜಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಬಜರಂಗದಳದ ಇಬ್ಬರು ಸದಸ್ಯರನ್ನು ಬುಧವಾರ ಬಂಧಿಸಲಾಗಿದೆ ಎಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ.
ಮಂಗಲ್ಡೊಯಿಯಲ್ಲಿರುವ ಮಹರ್ಷಿ ವಿದ್ಯಾ ಮಂದಿರ ಶಾಲೆಯ ಆವರಣದಲ್ಲಿ ಶಿಬಿರವನ್ನು ಆಯೋಜಿಸಿದ್ದಕ್ಕಾಗಿ ಬಜರಂಗದಳದ ಇಬ್ಬರು ಸದಸ್ಯರಾದ ಬಿಜೋಯ್ ಘೋಷ್ ಮತ್ತು ಗೋಪಾಲ್ ಬೋರೊ ನನ್ನು ಬಂಧಿಸಲಾಗಿದೆ ಎಂದು ದರ್ರಾಂಗ್ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಸೋನೊವಾಲ್ ತಿಳಿಸಿದ್ದಾರೆ.
“ಕೋರ್ಟ್ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಶಾಲೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ತರಬೇತಿ ಶಿಬಿರದಲ್ಲಿ ಭಾಗಿಯಾಗಿರುವ ಇತರರನ್ನು ಬಂಧಿಸಲು ತನಿಖೆ ನಡೆಯುತ್ತಿದೆ” ಎಂದು ಅವರು ಹೇಳಿದ್ದಾರೆ.





