September 20, 2024

ಉಡುಪಿ: ವಾಟ್ಸಪ್ ಮೆಸೇಜ್‌‌ಗಳಿಗೆ, ಯಾವುದೇ ವದಂತಿಗಳಿಗೆ ಗಮನ ಕೊಡಬೇಡಿ: ಕಾಲೇಜಿಗೆ ಭೇಟಿ ನೀಡಿದ ಖುಷ್ಬೂ ಹೇಳಿಕೆ

0

ಉಡುಪಿ: ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಮಾಡಿರುವ ಬಗ್ಗೆ ಈಗಷ್ಟೇ ನಾನು ತನಿಖೆಯನ್ನು ಆರಂಭ ಮಾಡಿದ್ದು, ಯಾವುದೇ ಮಾಹಿತಿಗಳನ್ನು ಹೊರಗೆ ಹೇಳಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಯಾವುದೇ ಅಂತಿಮ ತೀರ್ಮಾನಕ್ಕೆ ಬರಬೇಡಿ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಹೇಳಿದ್ದಾರೆ.

ಕಾಲೇಜಿಗೆ ಭೇಟಿ ನೀಡಿ ಕಾಲೇಜು ಆಡಳಿತ ಮಂಡಳಿ, ಸಂತ್ರಸ್ತೆ ಮತ್ತು ಆರೋಪಿತ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಈಗಷ್ಟೇ ನಾನು ತನಿಖೆಯನ್ನು ಆರಂಭ ಮಾಡಿದ್ದೇನೆ ಯಾವುದೇ ಮಾಹಿತಿಗಳನ್ನು ಹೊರಗೆ ಹೇಳಲು ಸಾಧ್ಯವಿಲ್ಲ. ಒಳಗಡೆ ಏನು ಚರ್ಚೆ ಆಯ್ತು ಎಂದು ಬಹಿರಂಗಪಡಿಸಲು ಸಾಧ್ಯವಿಲ್ಲ. ಈಗಲೇ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದರು.

ಪೊಲೀಸರ ಹೇಳಿಕೆ ಹೊರತಾಗಿ ಸದ್ಯ ಜನರು ಬೇರೆ ಯಾವುದೇ ಊಹಾಪೋಹಗಳಿಗೆ ಕಿವಿ ಕೊಡಬೇಡಿ. ಮಾಹಿತಿ ಸಂಗ್ರಹಕ್ಕೆ ನಮಗೆ ಇನ್ನು ಸ್ವಲ್ಪ ಸಮಯಬೇಕು. ಎಲ್ಲರೂ ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಬೇಕೆಂದು ಪ್ರಾಮಾಣಿಕವಾಗಿ ಕೋರುತ್ತೇನೆ. ಯಾವುದೇ ವದಂತಿಗಳಿಗೆ ವಾಟ್ಸಪ್ ಮೆಸೇಜ್ ಗಳಿಗೆ ಗಮನ ಕೊಡಬೇಡಿ. ನಾವೇ ಸರಿಯಾದ ಮಾಹಿತಿಯನ್ನು ನೀಡುತ್ತೇವೆ. ಸಂಬಂಧಪಟ್ಟ ಫೋನ್ ಗಳು ವಿಧಿ ವಿಜ್ಞಾನ ಪ್ರಯೋಗಕ್ಕೆ ಕಳುಹಿಸಲಾಗಿದದು, ಇದಕ್ಕೆ ಹೊರತಾಗಿ ಯಾವುದೇ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ಇನ್ನು ನಮಗೆ ನಮ್ಮ ಕೆಲಸ ಮಾಡಲು ಬಿಡಿ. ನಾವು ಯಾರನ್ನು ಮಾತನಾಡಿಸುತ್ತೇವೆ ಎಲ್ಲಿಗೆ ಹೋಗುತ್ತೇವೆ ಎಂದು ಹಿಂಬಾಲಿಸಬೇಡಿ. ಎನ್ ಸಿಡಬ್ಲ್ಯೂ ಪರವಾಗಿ ನಾನು ಸ್ಥಳದಲ್ಲಿ ಇದ್ದೇನೆ. ಸದ್ಯ ನಿಮಗೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಆರೋಪಗಳು ಅನೇಕ ಇರಬಹುದು, ಅದರ ಆಧಾರದಲ್ಲಿ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ನಾನು ನಿಮಗೆ ಯಾವುದೇ ಬ್ರೇಕಿಂಗ್ ನ್ಯೂಸ್ ಕೊಡಲು ಇಲ್ಲಿ ಇಲ್ಲ. ಇದು ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಸಂಬಂಧಿಸಿದ ವಿಚಾರ. ಇದು ಎರಡು ನಿಮಿಷದ ನೂಡಲ್ಸ್ ಥರ ಅಲ್ಲ ಎಂದರು.

ಟಾಯ್ಲೆಟ್ ನಲ್ಲಿ ಹಿಡನ್ ಕ್ಯಾಮೆರಾ ಇರಿಸಲಾಗಿದೆ ಎನ್ನುವ ರೂಮರ್ ನಂಬಬೇಡಿ. ಹರಿದಾಡುತ್ತಿರುವ ಸುಳ್ಳು ವಿಡಿಯೋಗಳನ್ನು ನಂಬಬೇಡಿ. ಇದೊಂದು ಶೈಕ್ಷಣಿಕ ಕೇಂದ್ರ ಎಲ್ಲಿ ಹಿಡನ್ ಕ್ಯಾಮೆರಾ ಇರಲು ಸಾಧ್ಯವಿಲ್ಲ. ಪೊಲೀಸರ ಜೊತೆಗೆ ನಾವು ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ಪೊಲೀಸರ ಸಹಕಾರದೊಂದಿಗೆ ನಮ್ಮ ತನಿಖೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!