ಪ್ರತೀಕಾರದ, ಪ್ರಗತಿಹೀನ ಬಜೆಟ್ ಮಂಡಿಸಿದ್ದಾರೆ ಸಿದ್ದರಾಮಯ್ಯ: ನಳಿನ್ ಕುಮಾರ್ ಕಟೀಲ್ ವಾಗ್ದಾಳಿ
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್ ಒಂದು ರೀತಿ ಪ್ರತೀಕಾರದ ಬಜೆಟ್. ಈ ಬಜೆಟ್ ರಾಜ್ಯ ಸರಕಾರದ್ದೇ ಆದರೂ ಕೇಂದ್ರ ಬಿಜೆಪಿ ಸರಕಾರವನ್ನು ಗುರಿ ಮಾಡಿರುವುದು ಕಂಡುಬರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಟೀಕಿಸಿದ್ದಾರೆ.
ಇದೊಂದು ನಿರಾಶಾದಾಯಕ, ಪ್ರಗತಿಹೀನ ಬಜೆಟ್ ಎಂದಿರುವ ಅವರು, ಬಜೆಟ್ ಮಂಡಿಸುವ ವೇಳೆ ಕೇಂದ್ರ ಸರಕಾರ, ಮೋದಿಜಿ ಅವರನ್ನು ಟೀಕಿಸುವುದಕ್ಕಾಗಿಯೇ ಈ ಅವಕಾಶವನ್ನು ಉಪಯೋಗ ಮಾಡಿಕೊಂಡಿದ್ದಾರೆ. ರಾಜ್ಯಗಳ ಒಕ್ಕೂಟದ ಒಳಗಡೆ ಕೇಂದ್ರದ ಜೊತೆ ಸಂಘರ್ಷ, ಮುಂದಿನ ಚುನಾವಣೆ ದೃಷ್ಟಿಯಿಂದ ರಾಜಕೀಯ ಸಂಘರ್ಷದ ವೇದಿಕೆಯಾಗಿ ಈ ಬಜೆಟನ್ನು ಬಳಸಿಕೊಂಡಿರುವುದು ಕಾಣಿಸಿದೆ ಎಂದರು.
ರಾಜ್ಯದ ಪ್ರಗತಿಗೆ ಪೂರಕ ಅಂಶಗಳು ಈ ಬಜೆಟ್‍ನಲ್ಲಿ ಇಲ್ಲವೇ ಇಲ್ಲ. ತಮ್ಮ ಚುನಾವಣಾ ಗೆಲುವಿಗೆ ಬೇಕಾದ ಗ್ಯಾರಂಟಿ ಮೂಲಕ ಏನೇನು ವಾಗ್ದಾನ ನೀಡಿದ್ದರೋ ಅದರ ಅನುಷ್ಠಾನಕ್ಕೆ ಕರ್ನಾಟಕದ ಗರಿಷ್ಠ ತೆರಿಗೆ ಹಣವನ್ನು ಮೀಸಲಿಡುವ ಥರ ಆಗಿದೆ ಎಂದು ವಿಶ್ಲೇಷಿಸಿದ್ದಾರೆ.
ಮುಂದಿನ ಕರ್ನಾಟಕ ನಿರ್ಮಾಣದ, ಅಭಿವೃದ್ಧಿಗೆ ಪೂರಕ ಅಂಶಗಳು ಈ ಬಜೆಟ್‍ನಲ್ಲಿ ಇಲ್ಲವೇ ಇಲ್ಲ. ಮುಂದಿನ ಕರ್ನಾಟಕ ನಿರ್ಮಾಣದ ದಾರಿಯೂ ಸುಗಮವಾಗಿ ಕಂಡುಬರುವುದಿಲ್ಲ. ಗೆಲುವಿಗೆ ಸೀಮಿತವಾಗಿರುವ ಗ್ಯಾರಂಟಿ ಆಗಿದೆಯೇ ಹೊರತು ಅದರಿಂದ ಮಾನವ ವಿಕಾಸ ಕಾಣುತ್ತಿಲ್ಲ. ಈಗಾಗಲೇ ಅವರು ಘೋಷಿಸಿದ ಅನೇಕ ಯೋಜನೆಗಳನ್ನು ಕೇಂದ್ರ ಸರಕಾರ ಮಾಡಿ ತೋರಿಸಿದೆ. ಕೆಲವು ಸಮುದಾಯಗಳು ತಮ್ಮ ವಾರಸುದಾರರು ಎಂಬ ರೀತಿಯಲ್ಲಿ ಬಜೆಟ್ ಒಳಗಡೆ ಎಲ್ಲ ಅಂಶಗಳನ್ನು ಸೇರಿಸಿದ್ದಾರೆ. ದೊಡ್ಡ ರೀತಿಯ ಸಾಲದ ಬಲೆಯ ಒಳಗೆ ರಾಜ್ಯ ಸಿಲುಕಲಿದೆ. ಮೊದಲ ವರ್ಷವೇ ದೊಡ್ಡ ಪ್ರಮಾಣದ ಸಾಲವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.




