ವಿಟ್ಲ: ಬೆಂಗಳೂರಿನ ಪ್ರಣವ್ ಫೌಂಡೇಶನ್ ವತಿಯಿಂದ ಆರ್ ಎಂ ಎಸ್ ಎ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಗೆ ಬೇಕಾಗುವ ವಸ್ತುಗಳ ಕೊಡುಗೆ
ವಿಟ್ಲ: ಸರಕಾರಿ ಪ್ರೌಢಶಾಲೆ ಆರ್ ಎಂ ಎಸ್ ಎ ವಿಟ್ಲ ಇಲ್ಲಿನ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಮೂಲಕ ಪಾಠಗಳನ್ನು ಮನದಟ್ಟು ಮಾಡಲು ಸಹಕಾರಿಯಾಗುವಂತೆ ಬೆಂಗಳೂರಿನ ಪ್ರಣವ್ ಫೌಂಡೇಶನ್ ವತಿಯಿಂದ ಸ್ಮಾರ್ಟ್ ಕ್ಲಾಸ್ ಗೆ ಬೇಕಾಗುವ ಟಿವಿ, ಪೆನ್ ಡ್ರೈವ್, ವೆಬ್ ಕ್ಯಾಮ್, ಲ್ಯಾಪ್ ಟಾಪ್, ಕೀಬೋರ್ಡ್, ವೈರ್ಲೆಸ್ ಮೌಸ್, ಪ್ರಿಂಟರನ್ನು ನೀಡುವುದರೊಂದಿಗೆ ಅವುಗಳನ್ನು ಬಳಸುವ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ನೀಡಲಾಯಿತು.
ಸರಳ ಸುಂದರ ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀ ಸುಬ್ರಾಯ ಪೈ ಇವರು ದೀಪ ಬೆಳಗಿಸಿ, ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲು ದೇವರು ಹರಸಲಿ ಎಂದು ಹಾರೈಸಿದರಲ್ಲದೆ ಸರ್ಕಾರಿ ಸಂಸ್ಥೆಗೆ ಸಹಕಾರ ನೀಡಿದುದಕೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಸಂಸ್ಥೆಯ ಮುಖ್ಯ ಶಿಕ್ಷಕಿ ಅನ್ನಪೂರ್ಣಾ ಅವರು ನಿರೂಪಿಸಿದರು. ಸಮಾಜ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ವಿನೋದ ಪಿ. ಅವರು ವಂದನಾರ್ಪಣೆಗೈದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಶಾರದಾ ಅವರು ಉಪಸ್ಥಿತರಿದ್ದರು. ಎಲ್ಲ ಶಿಕ್ಷಕರೂ ಸಹಕರಿಸಿದರು.




