December 15, 2025

ಮಂಗಳೂರು: ಪೋಕ್ಸೋ ಪ್ರಕರಣದಲ್ಲಿ ಕರ್ತವ್ಯ ಲೋಪ: 3 ಹಿರಿಯ ಪೊಲೀಸ್ ಅಧಿಕಾರಿಗಳಿಗೆ 5 ಲಕ್ಷ ರೂ. ದಂಡ

0
ms-230623-judge.jpg

ಮಂಗಳೂರು: ಪೋಕ್ಸೋ ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸಿ ನಿರಪರಾಧಿಗಳ ಮೇಲೆ ಕೇಸು ಜಡಿದ ಪೊಲೀಸ್ ಅಧಿಕಾರಿಗಳಿಗೆ ಮಂಗಳೂರು ಜಿಲ್ಲಾ ಹೆಚ್ಚುವರಿ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯ ಭಾರೀ ದಂಡ ವಿಧಿಸಿದೆ.

ನ್ಯಾಯಾಲಯಕ್ಕೂ ತಪ್ಪು ಮಾಹಿತಿ ನೀಡಿದ ಹಾಗೂ ದಾಖಲೆಗಳನ್ನು ನೀಡುವಲ್ಲೂ ಕರ್ತವ್ಯ ಲೋಪ ಎಸಗಿರುವ ಸರ್ಕಲ್ ಇನ್ಸ್‌ಪೆಕ್ಟರ್ ಲೋಕೇಶ್ ಎ.ಸಿ., ಸಬ್‌ ಇನ್ಸ್‌ಪೆಕ್ಟರ್ ಶ್ರೀಕಲಾ ಹಾಗೂ ಮತ್ತೋರ್ವ ಸಬ್‌ ಇನ್ಸ್‌ಪೆಕ್ಟರ್ ಪುಷ್ಪಾರಾಣಿ ಅವರ ವಿರುದ್ಧ ನ್ಯಾಯಾಲಯ ಲಕ್ಷ ರೂ. ದಂಡ ವಿಧಿಸಿದೆ

ಆರೋಪಿಗಳು ನೈಜ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸದೆ ನಿರಪರಾಧಿಗಳಾದ ಚಂದ್ರಪ್ಪ ಮತ್ತು ಪ್ರಸಾದ್ ಎಂಬ ಕೂಲಿ ಕಾರ್ಮಿಕರ ಮೇಲೆ ಯಾವುದೇ ಸಾಕ್ಷ್ಯಾಧಾರ ಇಲ್ಲದಿದ್ದರೂ ಪ್ರಕರಣ ದಾಖಲಿಸಿರುವ ಮೂವರು ಪೊಲೀಸ್ ಅಧಿಕಾರಿಗಳಿಗೆ ಒಟ್ಟು ಐದು ಲಕ್ಷ ರೂ. ದಂಡ ವಿಧಿಸಿದ್ದು,ಈ ಪೈಕಿ ನಿರ್ದೋಷಿ ಎಂದು ಸಾಬೀತಾದ ಚಂದ್ರಪ್ಪ ಎಂಬವರಿಗೆ ನಾಲ್ಕು ಲಕ್ಷ ಹಾಗೂ ನಿರ್ದೋಷಿ ಪ್ರಸಾದ್ ಅವರಿಗೆ ಒಂದು ಲಕ್ಷ ರೂ.ಗಳನ್ನು 40 ದಿನಗಳ ಒಳಗಾಗಿ ಪಾವತಿಸಬೇಕು. ಈ ದಂಡವನ್ನು ನ್ಯಾಯಾಲಯದಲ್ಲಿ ಪಾವತಿಸಬೇಕು ಎಂದು ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಂ. ರಾಧಾಕೃಷ್ಣ ಅವರು ಆದೇಶ ಹೊರಡಿಸಿದ್ದಾರೆ.

ಮೂಡಬಿದಿರೆ ತಾಲೂಕು ಶಿರ್ತಾಡಿ ಗ್ರಾಮದ ವಿದ್ಯಾನಗರ ಮಕ್ಕಿ ಎಂಬಲ್ಲಿ ಪ್ರಕರಣದ ಸಂತ್ರಸ್ತೆ ತನ್ನ ತಂದೆ, ತಾಯಿ ಹಾಗೂ ಒಬ್ಬ ಸಹೋದರನ ಜೊತೆ ವಾಸವಾಗಿದ್ದರು. ತಂದೆ-ತಾಯಿ ಕೂಲಿ ಕಾರ್ಮಿಕರಾಗಿದ್ದು, ಜುಲೈ 15ರ 2022ರಂದು ಸಂತ್ರಸ್ತೆಯು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ, ತನ್ನ ಮೇಲೆ ಅದೇ ಊರಿನ ಪ್ರಸಾದ್ ಎಂಬಾತ ಬಲಾತ್ಕಾರವಾಗಿ ಅತ್ಯಾಚಾರ ಮಾಡಿ ತಾನು ನಾಲ್ಕು ತಿಂಗಳ ಗರ್ಭೀಣಿಯಾಗಲು ಕಾರಣನಾಗಿದ್ದಾನೆ ಎಂದು ಪ್ರಸಾದ್ ವಿರುದ್ಧ ಅತ್ಯಾಚಾರ ಪ್ರಕರಣದ ದೂರು ದಾಖಲಿಸಿದ್ದರು.

ಮಂಗಳೂರು ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ವೈದ್ಯರು ಸದ್ರಿ ಸಂತ್ರಸ್ತೆಯನ್ನು ದಾಖಲಿಸಿ ಆರೈಕೆ ನೀಡಿದರು. ಬಳಿಕ, ಮಂಗಳೂರು ಜೆಎಂಎಫ್‌ಸಿ ನ್ಯಾಯಾಧೀಶರ ಮುಂದೆ ಸಂತ್ರಸ್ತೆ ಹೇಳಿಕೆ ಹೇಳಿಕೆ ಕೊಡುವಾಗಲೂ ತನ್ನ ದೂರಿನ ಅಂಶಗಳನ್ನೇ ಪುನರುಚ್ಚರಿಸಿದ್ದಳು. ಅದರಂತೆ ಮಂಗಳೂರು ಮಹಿಳಾ ಪೊಲೀಸರು ಪ್ರಸಾದ್ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ನಂತರ, ಮಹಿಳಾ ಪೊಲೀಸ್ ಠಾಣೆಯ ಸಬ್‌ ಇನ್ಸ್‌ಪೆಕ್ಟರ್ ಶ್ರೀಕಲಾ ಅವರು ಸಂತ್ರಸ್ತೆಯ ಮರುಹೇಳಿಕೆಯನ್ನೂ ಪಡೆದುಕೊಂಡಿದ್ದರು. ಈ ಹೇಳಿಕೆಯಲ್ಲಿ ಸಂತ್ರಸ್ತೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದು ಪ್ರಸಾದ್ ಅಲ್ಲ, ತನ್ನ ಮಾಲೀಕ ಸಂದೇಶ ಎಂದು ಸ್ಪಷ್ಟವಾಗಿ ಹೇಳಿದ್ದಳು. ಮಾನ್ಯ ಜೆಎಂಎಫ್‌ಸಿ ನ್ಯಾಯಾಲಯದಲ್ಲೂ ಸಾಕ್ಷ್ಯ ಹೇಳಿಕೆ ನೀಡುವಾಗ ಸಂದೇಶನಿಗೆ ಹೆದರಿ ಪ್ರಸಾದ್ ಹೆಸರನ್ನು ಉಚ್ಚರಿಸಿ ಹೇಳಿಕೆ ನೀಡಿದ್ದಳು. ಇದಾದ ಬಳಿಕ, 12 ಅಕ್ತೋಬರ್ 2022ರಂದು ಸಂತ್ರಸ್ತೆಯನ್ನು ಸಬ್‌ ಇನ್ಸ್‌ಪೆಕ್ಟರ್ ಶ್ರೀಕಲಾ ಪುನಃ ವಿಚಾರಣೆಗೆ ಒಳಪಡಿಸಿದಾಗ, ಸಂತ್ರಸ್ತೆಯು ಹೇಳಿಕೆ ನೀಡಿ, ತನ್ನ ಮೇಲೆ ಅತ್ಯಾಚಾರ ಎಸಗಿದ್ದು ತನ್ನ ತಂದೆ ಚಂದ್ರಪ್ಪನೇ ಎಂದು ಹೇಳಿಕೆ ಬದಲಾಯಿಸಿರುತ್ತಾಳೆ. ಈ ಹೇಳಿಕೆಯ ಆಧಾರದಲ್ಲಿ ಆಕೆಯ ತಂದೆ ಚಂದ್ರಪ್ಪ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಾರೆ.

ಇನ್ನು ಈ ಪ್ರಕರಣದ ವಿಚಾರಣಾಧಿಕಾರಿ ಆಗಿದ್ದ ಮಹಿಳಾ ಪೊಲೀಸ್ ಠಾಣೆಯ ಆಗಿನ ಸರ್ಕಲ್ ಇನ್ಸ್‌ಪೆಕ್ಟರ್ ಲೋಕೇಶ್ ಎ.ಸಿ. ಅವರು ಸಂದೇಶನ ಮೇಲೆ ಕೇಸು ದಾಖಲಿಸದೇ ನಿರ್ಲಕ್ಷ್ಯ ತೋರಿದ್ದರು. ಹಾಗೂ ಯಾವುದೇ ದೂರುಗಳಿಲ್ಲದ ರತ್ನಪ್ಪ ಮತ್ತು ಸದ್ರಿ ಆರೋಪಿಗಳಾದ ಚಂದ್ರಪ್ಪರ ರಕ್ತದ ಮಾದರಿಯನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಲು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆದರೆ, ಸಂದೇಶನ ರಕ್ತದ ಮಾದರಿಯನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿರಲಿಲ್ಲ.

Leave a Reply

Your email address will not be published. Required fields are marked *

error: Content is protected !!