‘ಗೃಹಲಕ್ಷ್ಮಿಗೆ ಗ್ರಹಣ, ಗೃಹಜ್ಯೋತಿ ಈಗ ಸುಡುಜ್ಯೋತಿ’: ಕಾಂಗ್ರೆಸ್ ನ ಗ್ಯಾರಂಟಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
ಬೆಂಗಳೂರು: 5 ಗ್ಯಾರಂಟಿಗಳಿಂದ ಜನೋದ್ಧಾರ ಗ್ಯಾರಂಟಿ ಎಂದು ಹಸಿಸುಳ್ಳು ಹೇಳಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಬರಗೆಟ್ಟ ಈ ಹೊತ್ತಿನಲ್ಲಿ ಅಂಬರದ ಮೇಲೆ ಕೂತು ಸ್ವಯಂವರ ಮಾಡಿಕೊಳ್ಳುತ್ತಿರುವ ಮತಗೆಟ್ಟ ವರನಂತೆ ವರ್ತಿಸುತ್ತಿದೆ. ಬೆಲೆ ಏರಿಕೆ ಹೊಡೆತಕ್ಕೆ ಜನ ತತ್ತರಿಸುತ್ತಿರುವುದು ಅದರ ಕಣ್ಣಿಗೆ ಕಾಣುತ್ತಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಪಕ್ಷದ ಹೊಸ ಗ್ಯಾರಂಟಿಗಳೆಂದರೆ, ಅಕ್ಕಿಭಾಗ್ಯ ಹಗಲು ಕನಸು, ಬೆಲೆ ಏರಿಕೆ ಕನಸು ನನಸು!, ಗೃಹಜ್ಯೋತಿ ಈಗ ಸುಡುಜ್ಯೋತಿ!!, ಶಕ್ತಿ ಯೋಜನೆಯಿಂದ ಸಾರಿಗೆ ವ್ಯವಸ್ಥೆಯಲ್ಲಿ ಅರಾಜಕತೆ!!!, ಗೃಹಲಕ್ಷ್ಮಿಗೆ ಗ್ರಹಣ!!!!, ನಿದಿರೆಗೆ ಜಾರಿದೆ ಯುವನಿಧಿ!!!! ಎಂದರು.
ನನಗೂ ಫ್ರೀ, ನಿನಗೂ ಫ್ರೀ ಎಂದು ಗ್ಯಾರಂಟಿ ಜಾಗಟೆ ಹೊಡೆದ ಈ ಸರ್ಕಾರಕ್ಕೆ ಮಾರುಕಟ್ಟೆಯಲ್ಲಿ ಗಗನಮುಖಿಯಾದ ಆಹಾರ ಪದಾರ್ಥಗಳ ಬೆಲೆ ಮೇಲೆ ನಿಯಂತ್ರಣವೇ ಇಲ್ಲ. ಆಹಾರ ಮತ್ತು ನಾಗರಿಕ ಪೂರೈಕೆ, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಗಳು ಜನರ ಕಣ್ಣೀರಿನಲ್ಲಿ ಗೆಣಸು ಬೇಯಿಸಿಕೊಳ್ಳುತ್ತಿವೆ. ಅವರಿಗೆ ಬೆಲೆ ಇಳಿಕೆ ಬಗ್ಗೆ ಚಿಂತನೆಯೇ ಇಲ್ಲ ಎಂದಿದ್ದಾರೆ.
ಇನ್ನು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಈ ಸರ್ಕಾರ ಬಂದು ತಿಂಗಳ ಮೇಲಾಯಿತು. ಅಧಿಕಾರ ಸಿಕ್ಕ ಕೂಡಲೇ ವರ್ಗಾವಣೆ ದಂಧೆಯ ದಾಸ್ಯಕ್ಕೆ ಬಿದ್ದ ಸರ್ಕಾರಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಲೇ ಹೋಗುತ್ತಿರುವ ಬೆಲೆಗಳ ಬಗ್ಗೆ, ಆಹಾರ ಪದಾರ್ಥಗಳ ದುಬಾರಿ ಬಗ್ಗೆ ಗಮನ ಹೋಗಲೇ ಇಲ್ಲ. ಹಣದ ಹಪಾಹಪಿ ಭಾಗ್ಯಗಳನ್ನು ಬಲಿ ತೆಗೆದುಕೊಳ್ಳುವ ದುಸ್ಥಿತಿಗೆ ದೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.




