ಕೊಚ್ಚಿ: ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ:
ವೃತ್ತ ನಿರೀಕ್ಷಕರನ್ನು ಅಮಾನತುಗೊಳಿಸಿ ಕೇರಳ ಡಿಜಿಪಿ ಆದೇಶ
ಕೊಚ್ಚಿ: ಪತಿ ಮತ್ತು ಅತ್ತೆಯರಿಂದ ಕಿರುಕುಳದ ಆರೋಪದಲ್ಲಿ ಆತ್ಮಹತ್ಯೆ ಮಾಡಿಕೊಂಡ 21 ವರ್ಷದ ಕಾನೂನು ವಿದ್ಯಾರ್ಥಿನಿಯ ದೂರುಗಳನ್ನು ನಿರ್ಲಕ್ಷಿಸಿದ ಆರೋಪದ ಮೇಲೆ ಕೇರಳ ರಾಜ್ಯ ಡಿಜಿಪಿ ಅನಿಲ್ ಕಾಂತ್ ಅವರು ಅಲುವಾ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಸಿಎಲ್ ಸುಧೀರ್ ಅವರನ್ನು ಅಮಾನತುಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಧೀರ್ ವಿರುದ್ಧ ಇಲಾಖಾ ತನಿಖೆಗೆ ಡಿಜಿಪಿ ಆದೇಶಿಸಿದ್ದು, ಕೊಚ್ಚಿ (ಉತ್ತರ) ಪೊಲೀಸ್‌ನ ಟ್ರಾಫಿಕ್ ಎಸಿಪಿ ಫ್ರಾನ್ಸಿಸ್ ಶೆಲ್ಬಿ ಕೆಎಫ್ ಅವರು ನಡೆಸಲಿದ್ದಾರೆ.
ಪ್ರತಿಪಕ್ಷಗಳು ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿವೆ. ಮೃತ ಮಹಿಳೆ ಮೌಫಿಯಾ ಪರ್ವೀನ್ ತನ್ನ ಪತಿ ಮಹಮ್ಮದ್ ಸುಹೇಲ್ ಮತ್ತು ಆತನ ಕುಟುಂಬಸ್ಥರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಪ್ರಕರಣದಲ್ಲಿ ಸುಹೇಲ್, ಆಕೆಯ ಮಾವ ಯೂಸುಫ್ ಮತ್ತು ಆಕೆಯ ಅತ್ತೆ ರುಖಿಯಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.





