ಉಪ್ಪಿನಂಗಡಿ: ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನ್ನು ರಕ್ಷಿಸಿದ ಯುವಕರು
ಉಪ್ಪಿನಂಗಡಿ: ನೇತ್ರಾವತಿ ಸೇತುವೆಯ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೈಯಲು ಯತ್ನಿಸಿದ ಯುವಕನನ್ನು ಸ್ಥಳೀಯರ ಯುವಕರ ತಂಡ ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಪುತ್ತೂರಿನ ಕೊಡಿಪ್ಪಾಡಿ ಮನೆ ನಿವಾಸಿ ನಾಗೇಶ (23) ಎಂಬಾತ ಗುರುವಾರ ನೇತ್ರಾವತಿ ಸೇತುವೆಯಲ್ಲಿ ಅಸಹಜವಾಗಿ ಆ ಕಡೆ ಈ ಕಡೆ ಅಲೆದಾಡುತ್ತಿದ್ದುದ್ದನ್ನು ಕಂಡ ಇಳಂತಿಲದ ಯು.ಟಿ. ಫಯಾಜ್, ರಶೀದ್ ಮತ್ತು ಇಕ್ಬಾಲ್ ಎಂಬ ಮೂವರು ಯುವಕರು ಸಂಶಯಿತರಾಗಿ ಸೇತುವೆಯತ್ತ ಧಾವಿಸಿದ್ದರು.
ವೇಳೆ ಆತ ನದಿಗೆ ಹಾರಲು ಮುಂದಾಗುತ್ತಿದ್ದಂತೆಯೇ ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಲಾಯಿತು.ಯುವಕ ತನ್ನ ಕಿಸೆಯಲ್ಲಿ ಚೀಟಿಯೊಂದನ್ನು ಇರಿಸಿದ್ದು, ಮನೆಯಲ್ಲಿ ತನಗೆ ಬೈಯುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದು ಈ ಕೃತ್ಯವೆಸಗಲು ಮುಂದಾಗಿದ್ದನೆನ್ನಲಾಗಿದೆ.
ದೈವ ನರ್ತನ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಈತನಿಗೆ ಪೊಲೀಸರು ಬುದ್ದಿವಾದ ಹೇಳಿ ಮನೆಯವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.





