ಸಿಖ್ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ:
ವಿಚಾರಣೆಗೆ ಹಾಜರಾಗುವಂತೆ ಕಂಗನಾ ರಣಾವತ್ ಗೆ ನೋಟಿಸ್
ಹೊಸದಿಲ್ಲಿ: ಸಾಮಾಜಿಕ ಮಾಧ್ಯಮಗಳಲ್ಲಿ ರೈತರು ಮತ್ತು ಸಿಖ್ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಮುಂಬೈನಲ್ಲಿ FIR ದಾಖಲಾದ ಬೆನ್ನಲ್ಲೆ ಅವರು ದೆಹಲಿ ವಿಧಾನಸಭೆಯ ಶಾಂತಿ ಮತ್ತು ಸೌಹಾರ್ದತೆ ಸಮಿತಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ಶಾಸಕ ರಾಘವ್ ಚಡ್ಡಾ ನೇತೃತ್ವದ ಸಮಿತಿ ಮುಂದೆ ಡಿಸೆಂಬರ್ 6 ರಂದು ಕಂಗನಾ ರಣಾವತ್ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
“ನಿಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 20.11.2021 ರಂದು ಅತಿರೇಕದ, ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಪೋಸ್ಟ್‌ಗಳನ್ನು ಪ್ರಕಟಿಸಿರುವುದಾಗಿ ಹಲವಾರು ದೂರುಗಳನ್ನು ಸಮಿತಿಯು ಸ್ವೀಕರಿಸಿದೆ ಎಂದು ಸಮಿತಿಯ ಉಪ ಕಾರ್ಯದರ್ಶಿ ಕಂಗನಾಗೆ ಕಳಿಸಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಕಂಗನಾರವರು ಸಿಖ್ಖರನ್ನು ಖಲಿಸ್ತಾನಿ ಭಯೋತ್ಪಾದಕರು ಎಂದು ಕರೆಯುವ ಮೂಲಕ ಇಡೀ ಸಿಖ್ ಸಮುದಾಯವನ್ನು ಅವಮಾನಿಸಿದ್ದಾರೆ. ಇದು ಕೋಮು ಸೌಹಾರ್ದತೆಗೆ ದೊಡ್ಡ ಧಕ್ಕೆಯಾಗಿದೆ” ಎಂದು ಸಮನ್ಸ್ ಹೇಳಿದೆ.





