ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದವರನ್ನು ಎನ್‌ಕೌಂಟರ್ ಮಾಡಬೇಕು: ಕೆಪಿಸಿಸಿ ಸಂಚಾಲಕಿ ಪ್ರತಿಭಾ ಕುಳಾಯಿ
ಮಂಗಳೂರು: ‘ವಾಮಂಜೂರು ಸಮೀಪದ ಪರಾರಿ ತಿರುವೈಲು ಗ್ರಾಮದ ಟೈಲ್ಸ್ ಫ್ಯಾಕ್ಟರಿ ಸಮೀಪ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದವರನ್ನು ಪೊಲೀಸರು ಎನ್‌ಕೌಂಟರ್ ಮಾಡಬೇಕು’ ಎಂದು ಕೆಪಿಸಿಸಿ ಸಂಚಾಲಕಿ ಪ್ರತಿಭಾ ಕುಳಾಯಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಪೊಲೀಸರು ಅತ್ಯಾಚಾರ ಆರೋಪಿಗಳನ್ನು ಕೂಡಲೇ ಬಂಧಿಸಿದ್ದು, ಅದಕ್ಕಾಗಿ ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಲಾಗುತ್ತದೆ. ಹೊರ ರಾಜ್ಯಗಳಿಂದ ಕೆಲಸಕ್ಕೆ ಬರುವ ಕಾರ್ಮಿಕರು ಇಂತಹ ಕೃತ್ಯ ಮಾಡುತ್ತಿರುವುದರಿಂದ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತಿದೆ. ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಹೊರ ರಾಜ್ಯದಿಂದ ಜಿಲ್ಲೆಗೆ ಬರುವ ಕಾರ್ಮಿಕರ ಮೇಲೆ ತೀವ್ರವಾದ ನಿಗಾ ಇಡುವುದ ಜತೆಗೆ ಅವರ ಮಾಹಿತಿ ಸಂಗ್ರಹಿಸಬೇಕು ಎಂದು ಒತ್ತಾಯಿಸಿದರು.
ಆರೋಪಿಗಳ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಾಗಿದೆ. ಆದರೆ ಇಂತಹವರ ವಿರುದ್ಧ ಕೂಡಲೇ ಕ್ರಮವಹಿಸಬೇಕು. ಇವರಿಗೆ ಜೀವಿಸುವ ಯಾವುದೇ ಅಧಿಕಾರ ಇಲ್ಲ. ಇಂತಹವರನ್ನು ಗುಂಡಿಕ್ಕಿ ಸಾಯಿಸಬೇಕು. ಇಂತಹ ಪ್ರಕರಣಗಳು ಮತ್ತೆ ನಡೆಯಬಾರದು. ಹೈದರಾಬಾದ್‌ನಲ್ಲಿ ಡಾ. ದೀಶಾ ಅವರ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ ಹಾಗೇ ಇಲ್ಲಿ ಕೂಡ ಆರೋಪಿಗಳನ್ನು ಎನ್‌ಕೌಂಟರ್ ಮಾಡಬೇಕು. ವಕೀಲರು ಕೂಡ ಇಂತಹ ಕೃತ್ಯದ ಆರೋಪಿಗಳ ಪರ ವಾದ ಮಂಡಿಸಬಾರದು, ಎಲ್ಲರೂ ಕೂಡ ಈ ಕೃತ್ಯದ ವಿರುದ್ಧ ಹೋರಾಟ ಮಾಡಬೇಕು ಎಂದು ಆಗ್ರಹಿಸಿದರು.





