30 ಮಕ್ಕಳನ್ನು ಅಪಹರಿಸಿ ಅತ್ಯಾಚಾರ ಎಸಗಿ ಹತ್ಯೆ: ಅಪರಾಧಿಗೆ ಜೀವಾವಧಿ ಶಿಕ್ಷೆ
ನವದೆಹಲಿ: 30 ಮಕ್ಕಳನ್ನು ಅಪಹರಿಸಿ ಅತ್ಯಾಚಾರಗೈದು ನಂತರ ಹತ್ಯೆಗೈದ ಅಪರಾಧಿಗೆ ದೆಹಲಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ರವೀಂದರ್ ಕುಮಾರ್ ಎಂಬಾತ ಆರು ವರ್ಷದ ಮಗುವನ್ನು ಅಪಹರಿಸಿ ಅತ್ಯಾಚಾರ ನಡೆಸಿ ಕೊಲೆಗೈದ ಬಳಿಕ ಮೇ 6ರಂದು ರೋಹಿಣಿ ನ್ಯಾಯಾಲಯವು ಆತ ಅಪರಾಧಿ ಎಂಬ ತೀರ್ಪನ್ನು ನೀಡಿತ್ತು.
ಈ ಕುರಿತು ಕಳೆದ ವಾರ ತೀರ್ಪು ನಡೆಯಬೇಕಿತ್ತು. ಆದರೆ ಕುಮಾರ್ ಆದಾಯ ಮತ್ತು ಆಸ್ತಿಯ ಬಗ್ಗೆ ವಿವರ ತಿಳಿಯದ ಕಾರಣ ತೀರ್ಪನ್ನು ಮುಂದೂಡಲಾಯಿತು.
ಮೂಲತಃ ಉತ್ತರಪ್ರದೇಶದ ಕಾಸ್‌ಗಂಜ್‌ನ ನಿವಾಸಿಯಾದ ರವೀಂದರ್ ಕುಮಾರ್ 2008ರಲ್ಲಿ ದೆಹಲಿಗೆ ಬಂದಿದ್ದ. ಆಗ ಆತನ ವಯಸ್ಸು 18 ಆಗಿತ್ತು. ತೀವ್ರ ಮದ್ಯವ್ಯಸನಿ ಮತ್ತು ಡ್ರಗ್ಸ್ ಚಟ ಹೊಂದಿದ್ದ ಈತ ಒಂದು ಗುಡಿಸಲಿನಲ್ಲಿ ವಾಸಿಸುತ್ತಿದ್ದು, ದಿನವಿಡೀ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹೀಗೇ 2008ರಿಂದ 2015ರ ಒಳಗಾಗಿ ಒಟ್ಟು 30 ಮಕ್ಕಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಈ ಕುರಿತು ಬೇಗಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು 2015ರಲ್ಲಿ ಈತನನ್ನು ದೆಹಲಿಯಲ್ಲಿ ಬಂಧಿಸಲಾಯಿತು.
ಶಿಕ್ಷೆಯ ಕುರಿತು ವಾದ ಮಂಡಿಸುವ ಸಂದರ್ಭದಲ್ಲಿ ದೆಹಲಿ ಪೊಲೀಸರು ಈತನಿಗೆ ಗರಿಷ್ಠ ಶಿಕ್ಷೆಯನ್ನು ನೀಡಬೇಕು ಎಂದು ಕೋರಿದ್ದರು. ಹೀಗಾಗಿ ಈತನಿಗೆ ದೆಹಲಿ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ನೀಡಿದೆ.




