November 22, 2024

ಖಾದರ್ ಗೆ ಸ್ಪೀಕರ್ ಹುದ್ದೆ:
ಕರಾವಳಿಯಲ್ಲಿ ಪರ-ವಿರೋಧ ಚರ್ಚೆಗಳು ಆರಂಭ

0

ಬೆಂಗಳೂರು: ಕರಾವಳಿಯಿಂದ ಆಯ್ಕೆಯಾಗಿರುವ ಹಿರಿಯ ಶಾಸಕ ಮಾಜಿ ಸಚಿವ ಯು.ಟಿ. ಖಾದರ್ ಈ ಬಾರಿಯೂ ಕೂಡ ಸಚಿವಾಕಾಂಕ್ಷಿಯಾಗಿದ್ರು. ಮಂಗಳೂರು ಅಂದರೆ ಉಳ್ಳಾಲ ಕ್ಷೇತ್ರದಿಂದ ಐದನೇ ಬಾರಿಗೆ ಗೆಲುವು ದಾಖಲಿಸಿಕೊಂಡಿರುವ ಖಾದರ್ ಹಿರಿಯರ ಸಾಲಿನಲ್ಲಿ ಕಂಡುಬರುವ ಪ್ರಮುಖ ನಾಯಕ ಎಂದರೆ ತಪ್ಪಾಗಲ್ಲ. ಸಿದ್ದು ಆಂಡ್ ಟೀಂ ನಲ್ಲಿ ಗುರುತಿಸಿಕೊಳ್ಳುವ ಪ್ರಭಾವಿಯೂ ಹೌದು. ಈ ಕಾರಣದಿಂದ ಯು.ಟಿ. ಖಾದರ್ ಪ್ರಭಾವಿ ಖಾತೆಗಳತ್ತನೇ ಕಣ್ಣಿಟ್ಟಿದ್ದರು.

ಆರೋಗ್ಯ, ಆಹಾರ, ಸಾರಿಗೆ, ಗೃಹ ಖಾತೆ ಸಿಗಬಹುದು ಎಂದು ಲೆಕ್ಕಾಚಾರ ಇಟ್ಟುಕೊಂಡಿದ್ದರು. ಈ ನಡುವೆ ಪಕ್ಷ ಕೈಗೊಂಡ ನಿರ್ಧಾರ ಅವರಿಗೆ ಬಿಸಿ ತುಪ್ಪದಂತಿತ್ತು. ಮಾತೆತ್ತಿದರೆ ಹೈಕಮಾಂಡ್ ತೀರ್ಮಾನವೇ ಫೈನಲ್ ಎನ್ನುತ್ತಿದ್ದ ಖಾದರ್ ಗೆ ಸ್ಪೀಕರ್ ಆಗುವಂತೆ ಹೈಕಮಾಂಡ್ ಸೂಚಿಸಿದ ಸಂದರ್ಭದಲ್ಲಿ ಯೋಚಿಸುವ, ನಿರಾಕರಿಸುವ ಮತ್ತೊಂದು ಅವಕಾಶವೇ ಇರಲಿಲ್ಲ. ಒಲ್ಲದ ಮನಸ್ಸಿನಿಂದಲೇ ತಲೆಯಾಡಿಸಿ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ ಯು.ಟಿ.ಕೆ.

ರಾಜ್ಯವನ್ನಾಳುತ್ತಿರುವ ಕಾಂಗ್ರೆಸ್ ಕಡಿಮೆ ಸ್ಥಾನ ಗೆದ್ದಿರುವುದು ಕರಾವಳಿಯಲ್ಲಿ. ಹೀಗಿರುವಾಗ ಕರಾವಳಿಗೆ ದೊಡ್ಡ ಸ್ಥಾನವನ್ನು ನೀಡಿದ್ದಲ್ಲಿ ಇತರ ಜಿಲ್ಲೆಗಳ ನಾಯಕರು ಮುಣಿಸಿಕೊಳ್ಳುತ್ತಾರೆ ಎಂಬ ಲೆಕ್ಕಾಚಾರ ಹೈಕಮಾಂಡ್ ಮುಂದೆ. ಮತ್ತೊಂದೆಡೆ ಹಿರಿಯ ಶಾಸಕರನ್ನು ಕಡೆಗಣಿಸಲಾಗದ ಸ್ಥಿತಿ. ಅದರಲ್ಲೂ ಈ ಹಿಂದೆ ವಿಧಾನಸಭೆ ವಿಪಕ್ಷ ಉಪನಾಯಕರಾಗಿ ಕೆಲಸ ಮಾಡಿದ ಅನುಭವ ಯು.ಟಿ. ಖಾದರ್ ಹೊಂದಿದ್ದಾರೆ. ಐದನೇ ಬಾರಿಗೆ ಆಯ್ಕೆ ಎಂದಾಕ್ಷಣ ಅನುಭವವೂ ಕೂಡ ದೊಡ್ಡದು. ತನ್ನ ಪಕ್ಷ ಹಾಗೂ ಇತರ ಪಕ್ಷಗಳೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿರುವುದು ಖಾದರ್ ಶ್ರೇಷ್ಟತೆ. ಸದನದೊಳಗೆ ಸಿದ್ದರಾಮಯ್ಯ ಬಳಿಕ ಒಂದಿಷ್ಟು ಖದರ್ ತೋರಿಸುತ್ತಿದ್ದುದು ಖಾದರ್. ಆದರೆ, ಇನ್ನು ಮುಂದೆ ಸಭಾಧ್ಯಕ್ಷ ಸ್ಥಾನದಲ್ಲಿದ್ದುಕೊಂಡು ಎಲ್ಲಾ ಪಕ್ಷಗಳನ್ನು ಸಮಾನವಾಗಿ ಕೊಂಡೊಯ್ಯುವುದು ಖಾದರ್ ಜವಾಬ್ದಾರಿ.

ಇನ್ನು ಖಾದರ್ ಅವರು ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸುತ್ತಿದ್ದಂತೆ ಕರಾವಳಿಯಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿದೆ. ಖಾದರ್ ಗೆ ದ.ಕ ಉಸ್ತುವಾರಿ ಸಚಿವ ಸ್ಥಾನ ತಪ್ಪಿದ್ದಕ್ಕೆ ಮುಸ್ಲಿಮರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಖಾದರ್ ಸಂಪುಟ ಸೇರಿದ್ದೇ ಆಗಿದ್ದಲ್ಲಿ ಉಸ್ತುವಾರಿ ಆಗುತ್ತಿದ್ದರು. ಆದರೆ ಕಡೇ ಕ್ಷಣದಲ್ಲಿ ಲೆಕ್ಕಾಚಾರ ತಲೆಕೆಳಗಾಗಿವೆ. ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಹೀಗಾಗಿ ಖಾದರ್ ಗೆ ಉಸ್ತುವಾರಿ ನೀಡಬೇಕು ಎನ್ನುವ ಒತ್ತಾಯ ಕರಾವಳಿ ಭಾಗದಿಂದ ಕೇಳಿಬರಲಾರಂಭಿಸಿದೆ. ಪ್ರಮುಖವಾಗಿ ಮುಸ್ಲಿ ಸಮುದಾಯದಿಂದ ಈಗಾಗಲೇ ಜಮೀರ್ ಅವರನ್ನು ಸಚಿವರನ್ನಾಗಿ ಆಯ್ಕೆ ಮಾಡಲಾಗಿದೆ. ಹೀಗಿರುವಾಗ ಮತ್ತೊಬ್ಬರನ್ನು ಸಚಿವರನ್ನಾಗಿ ಆಯ್ಕೆ ಮಾಡುವುದು ಕಾಂಗ್ರೆಸ್ ಗೆ ಕಗ್ಗಂಟು. ಇದೇ ಕಾರಣದಿಂದಾಗಿ ಖಾದರ್ ಖದರ್ ಬದಲಾಯಿಸಲು ಹೈಕಮಾಂಡ್ ನಿರ್ಧರಿಸಿದ್ದು. ರಾತ್ರೋರಾತ್ರಿ ಖಾದರ್ ಮನವೊಲಿಸಿದ್ದು. ಸಚಿವರಾಗುವ ಬದಲು ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಂತೆ ಹೈಕಮಾಂಡ್ ನಾಯಕ ಸುರ್ಜೆವಾಲ ಅವರು ಮನವೊಲಿಸಿದ್ದಾರೆ. ಈ ಕಾರಣದಿಂದಾಗಿ ವಿಧಾನಸಭೆಯ ಅಧ್ಯಕ್ಷರಾಗಲು ಖಾದರ್ ಅವರು, ಸಿದ್ದರಾಮಯ್ಯ ಹಾಗೂ ಡಿಕೆಶಿ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಬಹುತೇಕ ಅವಿರೋಧವಾಗಿ ಖಾದರ್ ಆಯ್ಕೆಯಾಗುವ ಸಾಧ್ಯತೆ ಇದೆ. ಬಿಜೆಪಿಯಿಂದ ಉಮೇದುವಾರಿಕೆ ಸಲ್ಲಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದ್ದು, ಇದರಿಂದಾಗಿ ಖಾದರ್ ಅವಿರೋಧ ಆಯ್ಕೆ ಖಚಿತ ಎನ್ನಲಾಗುತ್ತಿದೆ.

ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಸಾಕಷ್ಟು ಪರದಾಡಿಕೊಂಡಿದ್ದ ಕಾಂಗ್ರೆಸ್ ಗೆ ಈಗ ಶುರುವಾಗಿದೆ ಸಂಪುಟ ಸಂಕಟ. ಸಚಿವರನ್ನು ಆಯ್ಕೆ ಮಾಡುವುದು ಕೈ ನಾಯಕರಿಗೆ ದಾರದ ಮೇಲಿನ ನಡಿಗೆ. ಈ ನಡುವೆ ಸಚಿವಾಕಾಂಕ್ಷಿಯಾಗಿದ್ದ ಖಾದರ್ ಅವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸ್ಪೀಕರ್ ಎನ್ನುವ ಅಸ್ತ್ರ ದೆಲ್ಲಿ ಟೀಂ ಪ್ರಯೋಗಿಸಿದ್ದು, ವರ್ಕೌಟ್ ಆಗಿದಂತೆ ತೋರುತ್ತಿದೆ.

Leave a Reply

Your email address will not be published. Required fields are marked *

error: Content is protected !!