ಬೆಂಗಳೂರು: ಭಾರೀ ಮಳೆಗೆ ಅಂಡರ್ ಪಾಸ್ ಜಲಾವೃತ:
ಕಾರು ಮುಳುಗಿ ಓರ್ವ ಯುವತಿ ಸಾವು
ಬೆಂಗಳೂರು: ಕುಂಭದ್ರೋಣ ಮಳೆಯ ಪರಿಣಾಮ ಜಲಾವೃತಗೊಂಡ ಕೆಆರ್ ವೃತ್ತದಲ್ಲಿನ ಅಂಡರ್ ಪಾಸ್ ನಲ್ಲಿ ಸಿಲುಕಿ ತೀವ್ರ ಅಸ್ವಸ್ಥವಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಅಂಡರ್ ಪಾಸ್ ನಲ್ಲಿ ಮುಳುಗಡೆಯಾಗಿದ್ದ ಕಾರಿನಲ್ಲಿ ನಾಲ್ವರನ್ನು ರಕ್ಷಣೆ ಮಾಡಲಾಗಿತ್ತು. ಈ ನಡುವೆ ಅಸ್ವಸ್ಥಗೊಂಡಿದ್ದ ಮಹಿಳೆ ಭಾನುರೇಖಾ ಅವರು ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ವಿಧಾನಸೌಧದಿಂದ ಕಾರ್ಪೋರೇಷನ್ ಕಡೆಗೆ ಬರುವಾಗ ಕಾರು ಜಲಾವೃತಗೊಂಡ ಕೆ.ಆರ್ ಸರ್ಕಲ್ ಅಂಡರ್ ಪಾಸ್ನಲ್ಲಿ ಮುಳುಗಡೆಯಾಗಿದೆ. ಹೀಗಾಗಿ ಕಾರಿನಲ್ಲಿದ್ದ ನಾಲ್ವರ ಕುಟುಂಬವೊಂದು ಮಳೆ ನೀರಿಗೆ ಸಿಲುಕಿ ಸಾವಿನ ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರಕ್ಷಣಾ ಕಾರ್ಯ ಆರಂಭಿಸಿದರು. ನಾಲ್ವರ ಪೈಕಿ ಅಸ್ವಸ್ಥಗೊಂಡಿದ್ದ ಯುವತಿಯನ್ನು ರಕ್ಷಣೆ ಮಾಡಿ ನೃಪತುಂಗಾ ರಸ್ತೆಯಲ್ಲಿರೋ ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಯುವತಿ ಸಾವನ್ನಪ್ಪಿದ್ದಾಳೆ.
ಸಿಎಂ ಸಿದ್ದರಾಮಯ್ಯ ಸೇಂಟ್ ಮಾರ್ಥಾಸ್ ಗೆ ಭೇಟಿ ನೀಡಿದ್ದು, ಮಹಿಳೆ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು ಎಂದು ಸಿಎಂ ಹೇಳಿದ್ದಾರೆ.




