ಬೆಂಗಳೂರು: ಟರ್ಮಿನಲ್ 2 ರಲ್ಲಿ ಮಳೆ ನೀರಿನಿಂದ ಸೋರಿಕೆ:
5000 ಕೋಟಿ ವೆಚ್ಚದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದ ಹೊಸ ಟರ್ಮಿನಲ್
ಬೆಂಗಳೂರು: ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದ ಬೆಂಗಳೂರು ವಿಮಾನ ನಿಲ್ದಾಣದ 5,000 ಕೋಟಿ ರೂಪಾಯಿ ವೆಚ್ಚದ ಟರ್ಮಿನಲ್ 2ನಲ್ಲಿ ಮಳೆ ನೀರು ಸೋರಿಕೆಯಾಗುತ್ತಿರುವುದಾಗಿ ತಿಳಿದುಬಂದಿದೆ.
ಟರ್ಮಿನಲ್ 2 ಆಗಮನದ ಸ್ಥಳದಲ್ಲಿ ಮಳೆನೀರು ನಿಲ್ಲುವ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ನೆಟಿಜನ್ ಗಳು ರೂ 5,000 ಕೋಟಿ ಟರ್ಮಿನಲ್ “ನೈಜ ಮೌಲ್ಯ” ಕಾಣುತ್ತಿದೆ ಎಂದು ಟೀಕೆ ಮಾಡಿದ್ದಾರೆ.
ಕೆಲವು ಪ್ರಯಾಣಿಕರು ಟರ್ಮಿನಲ್‌ನ ಸೋರಿಕೆಯ ವೀಡಿಯೊಗಳು ಮತ್ತು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನವೆಂಬರ್ 11, 2022 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಹೊಸದಾಗಿ ನಿರ್ಮಿಸಲಾದ ಟರ್ಮಿನಲ್ ಎಂದು ಹಂಚಿಕೊಂಡಿದ್ದಾರೆ.
ಕೇವಲ 30 ನಿಮಿಷಗಳ ಕಾಲ ಸುರಿದ ಮಳೆಗೆ ಹೀಗೆ ಟರ್ಮಿನಲ್ ನಲ್ಲಿ ನೀರು ತುಂಬಿಕೊಂಡಿರುವುದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರು ಸೋರಿಕೆಯಾಗಿರುವುದನ್ನು ವಿಮಾನ ನಿಲ್ದಾಣದ ನಿರ್ವಾಹಕರಾದ ಬೆಂಗಳೂರು ಇಂಟರ್ನ್ಯಾಶನಲ್ ಏರ್ಪೋರ್ಟ್ ಲಿಮಿಟೆಡ್ (ಬಿಐಎಎಲ್) ಖಚಿತಪಡಿಸಿದೆ. ಜೊತೆಗೆ ಎರಡೂ ಟರ್ಮಿನಲ್ ಗಳಲ್ಲಿ ಮೂಲಸೌಕರ್ಯ ಮತ್ತು ಸುರಕ್ಷತೆಯ ಅತ್ಯುನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದೆ.