ಮಂಗಳೂರು: ನ್ಯಾಷನಲ್ ವಿಮೆನ್ಸ್ ಫ್ರಂಟ್ ಕರ್ನಾಟಕ ರಾಜ್ಯ ಪ್ರತಿನಿಧಿ ಸಭೆ
ಮಂಗಳೂರು: ನ್ಯಾಷನಲ್ ವಿಮೆನ್ಸ್ ಫ್ರಂಟ್ ಕರ್ನಾಟಕ ಇದರ ರಾಜ್ಯ ಪ್ರತಿನಿಧಿ ಸಭೆಯು 21/11/2021 ರಂದು ಮಂಗಳೂರಿನಲ್ಲಿ ಫರ್ಝಾನ ಮುಹಮ್ಮದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ರಾಜ್ಯ ಕಾರ್ಯದರ್ಶಿ ರಮ್ಲತ್ ವರದಿ ಮಂಡಿಸಿದರು.
ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಭಾರತದ ಸ್ವಾತಂತ್ರ್ಯ ಸಂಗ್ರಾಮವು ಭಾರತೀಯರ ತ್ಯಾಗ, ಬಲಿದಾನ ಏಕತೆ ಮತ್ತು ಸಮರ್ಪಣಾಭಾವದ ಸಂಕೇತ. ಕಂಗನಾ ರಾಣಾವತ್ ಇದನ್ನು ಭಿಕ್ಷೆಗೆ ಹೋಲಿಸಿ ಸಮಸ್ತ ಸ್ವಾತಂತ್ರ್ಯ ಸೇನಾನಿಗಳನ್ನು ಅವಮಾನಿಸಿದ್ದಾರೆ. ಸಾಧಕರು ಹಾಗೂ ಗೌರವಾನ್ವಿತ ವ್ಯಕ್ತಿಗಳಿಗೆ ಸಿಗಬೇಕಾದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಯನ್ನು ದೇಶದ್ರೋಹದ ಮಾತುಗಳನ್ನಾಡಿ ಸದಾ ವಿವಾದ ಸೃಷ್ಟಿಸುವಲ್ಲಿ ನಿರತರಾಗಿರುವ ಕಂಗನಾರಿಗೆ ನೀಡಿರುವುದು ವಿಪರ್ಯಾಸ. ಇಂತಹ ಅನೇಕ ಪ್ರಶಸ್ತಿಗಳು ಇತ್ತೀಚೆಗೆ ಅನರ್ಹರ ಪಾಲಿಗೆ ಸೇರುತ್ತಿದೆ. ಪ್ರಶಸ್ತಿಯ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಶಸ್ತಿಯನ್ನು ವಿವಾದಾತೀತ ಸಾಧಕರಿಗೆ ನೀಡಬೇಕು ಎಂದು ಸಭೆಯು ಒತ್ತಾಯಿಸುತ್ತದೆ.
ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಸರಕಾರದ ನಿರ್ಧಾರ ರೈತರ ಸುದೀರ್ಘ ಹೋರಾಟಕ್ಕೆ ಸಂದ ವಿಜಯ. ಆದರೆ ಈ ನಿರ್ಧಾರವು ಕಾರ್ಯರೂಪಕ್ಕೆ ತರುವವರೆಗೆ ಹೋರಾಟವು ಚಾಲ್ತಿಯಲ್ಲಿರಬೇಕು. ಏಕೆಂದರೆ ಈ ಹೋರಾಟವು ಅನೇಕ ತ್ಯಾಗ ಬಲಿದಾನಗಳಿಗೆ ಸಾಕ್ಷಿಯಾಗಿದೆ. ಹೋರಾಟವನ್ನು ಹತ್ತಿಕ್ಕಲು ಸರ್ಕಾರವು ನಡೆಸಿದ ಅನೇಕ ಕುತಂತ್ರಗಳ ಪರಿಣಾಮವಾಗಿ ಅನೇಕ ರೈತಾಪಿ ಕುಟುಂಬಗಳು ಬೀದಿಗೆ ಬಿದ್ದಿವೆ. ಇದಕ್ಕೆ ಸರಕಾರವೇ ನೇರ ಹೊಣೆ. ಆದ್ದರಿಂದ ಈ ಹೋರಾಟದಲ್ಲಿ ಮಡಿದ ರೈತರ ಕುಟುಂಬಗಳಿಗೆ ಪರಿಹಾರ ಧನ ನೀಡಬೇಕೆಂದು ಸಭೆಯು ಒತ್ತಾಯಿಸುತ್ತದೆ.
ರಾಜ್ಯದಲ್ಲಿ ಇತ್ತೀಚಿಗೆ ಸಂಘಪರಿವಾರದ ಪುಂಡಾಟಿಕೆ ಮಿತಿ ಮೀರುತ್ತಿದ್ದು, ರಾಜ್ಯದ ವಿವಿಧೆಡೆ ನಡೆಯುತ್ತಿರುವ ಅನೈತಿಕ ಪೊಲೀಸ್ ಗಿರಿಯಿಂದ ಜನರ ಬದುಕನ್ನು ಭೀತಿಗೆ ತಳ್ಳಿದೆ. ಕೊಡಗಿನ ಶನಿವಾರ ಸಂತೆಯಲ್ಲಿ ವಿದ್ಯಾರ್ಥಿನಿಯರನ್ನು ನಡುರಸ್ತೆಯಲ್ಲಿ ತಡೆದು ಅವರ ಜೊತೆ ಅನಾಗರಿಕವಾಗಿ ವರ್ತಿಸಿದ ಸಂಘಪರಿವಾರದ ಗೂಂಡಾಗಳ ವರ್ತನೆ ಖಂಡನೀಯ. ಈ ಬಗ್ಗೆ ಸರಕಾರ ಎಚ್ಚೆತ್ತುಕೊಂಡು ಕಠಿಣ ಕಾನೂನು ಕ್ರಮ ಕೈಗೊಂಡು ವಿದ್ಯಾರ್ಥಿನಿಯರ ಸುರಕ್ಷತೆಯನ್ನು ಖಾತರಿಪಡಿಸಬೇಕೆಂದು ಸಭೆಯು ಒತ್ತಾಯಿಸುತ್ತದೆ.





