ಬೆಳ್ತಂಗಡಿ ಸಮೀಪದ ಕೊಕ್ಕಡದ ಶಾಲೆಯಲ್ಲಿ ಕಳ್ಳತನ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ಕೊಕ್ಕಡದ ಶಾಲೆಯಲ್ಲಿ ಕಳ್ಳತನ ನಡೆಸಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಕಳ್ಳತನ ಮಾಡಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಡಬ ತಾಲೂಕಿನ ಕುಟ್ರುಪ್ಪಾಡಿ ನಿವಾಸಿಯಾ 24 ವರ್ಷದ ರಕ್ಷಿತ್ ಡಿ, 29 ವರ್ಷದ ತೀರ್ಥೇಶ್ ಎಂ, 30 ವರ್ಷದ ಯಜ್ಞೇಶ್ ಯು.ಕೆ, 23 ವರ್ಷದ ರೋಹಿತ್ ಶೆಟ್ಟಿ ಬಂಧಿತ ಆರೋಪಿಗಳಾಗಿದ್ದಾರೆ.
ಇವರು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸರಕಾರಿ ಪ್ರೌಢಶಾಲೆಯ ಬಾಗಿಲು ಮುರಿದು ಅಲ್ಲಿರಿಸಲಾಗಿದ್ದ ಸುಮಾರು 32 ಸಾವಿರ ರೂ. ಮೌಲ್ಯದ ಎಂಟು ಬ್ಯಾಟರಿಗಳನ್ನು ಕಳವು ಮಾಡಿದ್ದರು.
ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಒಂದು ಕಾರು ಹಾಗೂ ವಿವಿದೆಡೆ ಕಳ್ಳತನ ಮಾಡಿದ ಸುಮಾರು ಎರಡು ಲಕ್ಷ ರೂ.
ಮೌಲ್ಯದ ಬ್ಯಾಟರಿ ಹಾಗು ಕಳ್ಳತನಕ್ಕೆ ಉಪಯೋಗಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಚಾರಣೆಯ ವೇಳೆ ಆರೋಪಿಗಳು ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿರುವುದು ಬಹಿರಂಗಗೊಂಡಿದ್ದು ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ನಾಲ್ಕು ಶಾಲೆಗಳಿಂದ, ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಎರಡು ಶಾಲೆಗಳಿಂದ, ಪುತ್ತೂರು ನಗರ ಠಾಣಾ ವ್ಯಾಪ್ತಿಯ ಒಂದು ಶಾಲೆಯಿಂದ, ಬಂಟ್ವಾಳ ಠಾಣಾ ವ್ಯಾಪ್ತಿಯ ಒಂದು ಶಾಲೆಯಿಂದ ಹಾಗೂ ಧರ್ಮಸ್ಥಳ ಠಾಣಾ ವ್ಯಾಪ್ತಿಯ ಒಂದು ಶಾಲೆಯಲ್ಲಿ ಹೀಗೆ ಒಂಬತ್ತು ಶಾಲೆಗಳಲ್ಲಿ ಕಳ್ಳತನ ನಡೆಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.




