November 22, 2024

ವಿಟ್ಲ: ಬೊಳಂತಿಮೊಗರಿನಲ್ಲಿ ಕಾಂಗ್ರೆಸ್ ಪ್ರಚಾರ ಸಭೆ: 94ಸಿ ಹಕ್ಕು ಪತ್ರ ವಿತರಣೆ ಹೆಸರಿನಲ್ಲಿ ಜನರಿಂದ ಭಾರೀ ಲೂಟಿ: ಅಶೋಕ್ ಕುಮಾರ್ ರೈ

0

ವಿಟ್ಲ: ಬಿಜೆಪಿಯಿಂದ ಅಭಿವೃದ್ಧಿ ಶೂನ್ಯವಾಗಿದೆ. ನಾವು ಹೋದಲ್ಲಿ ಎಲ್ಲಾ ಜನರು ತಮ್ಮ ಸಮಸ್ಯೆಗಳನ್ನು ಹೇಳುತ್ತಿದ್ದಾರೆ. ಈ ಭಾಗದ ಶಾಸಕರಿಂದ ಜನರಿಗೆ ಭಾರೀ ತೊಂದರೆಯಾಗಿದೆ. ಅಕ್ರಮ ಸಕ್ರಮ ನನೆಗುದಿಗೆ ಬಿದ್ದಿದೆ. ೯೪ ಸಿ ಯಲ್ಲಿ ಭ್ರಷ್ಟಾಚಾರ ನಡೆದಿದೆ. ಕಡತಗಳು ಇನ್ನೂ ವಿಲೇವಾರಿಯಾಗಿಲ್ಲ. ೯೪ಸಿ ಹೆಸರಿನಲ್ಲಿ ಜನರಿಂದ ಭಾರೀ ಲೂಟಿ ಮಾಡಲಾಗಿದೆ. ಬಡವರ ಮನೆಗಳು ಶಿಥಿಲಗೊಂಡರು. ಕೇಳುವವರು ಇಲ್ಲದಂತಾಗಿದೆ. ಕಾಂಗ್ರೆಸ್ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ನಡೆಯಬೇಕು ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಮಂಗಳವಾರ ವಿಟ್ಲ ಸಮೀಪದ ಬೊಳಂತಿಮೊಗರಿನಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಬಡವರಿಗೆ ಹೆಚ್ಚಿನ ಸೌಲಭ್ಯ ನೀಡಿದ್ದು, ಕಾಂಗ್ರೆಸ್ ಸರಕಾರವಾಗಿದೆ. ಅಕ್ರಮ ಸಕ್ರಮ ಯೋಜನೆ ಮೂಲಕ ಬಡವರಿಗೆ ಸೂರು ನೀಡಿದೆ. ಮಹಿಳೆಯರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ನಮ್ಮ ಗ್ರಾಮ ನಮ್ಮ ರಸ್ತೆ ಮೂಲಕ ಇಲ್ಲಿಯ ಬಹುವರ್ಷದ ಸೇತುವೆ ನಿರ್ಮಿಸಲಾಗಿದೆ. ಕಂಬಳಬೆಟ್ಟು-ದಾಸರಬೆಟ್ಟು ಎಂಬಲ್ಲಿ ಸೇತುವೆ ಅವಶ್ಯಕತೆಯಿದ್ದು, ಅಶೋಕ್ ರೈ ಅವರು ಶಾಸಕರಾದ ಕೂಡಲೇ ಈ ಬೇಡಿಕೆ ಈಡೇರಿಕೆಯಾಗಲಿದೆ ಎಂದರು.

ಎಂ ಎಸ್ ಮೊಹಮ್ಮದ್ ಮಾತನಾಡಿ ಬಿಜೆಪಿ ಸರಕಾರ ಪಡಿತರ ಅಕ್ಕಿಯನ್ನು ಕಡಿತ ಮಾಡಿದ್ದಾರೆ. ಆದರೆ ಇಂದು ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳನ್ನು ವ್ಯಂಗ್ಯ ಮಾಡುತ್ತಿದೆ. ಕಾಂಗ್ರೆಸ್ ನ ಘೋಷಣೆಗಳು ಮಹಿಳೆಯರಿಗೆ ಹೆಚ್ಚು ಪ್ರಯೋಜನವಾಗಲಿದೆ. ಶಕುಂತಳಾ ಶೆಟ್ಟಿ ಅವಧಿಯಲ್ಲಿ ಬೋಳಂತಿಮೊಗರು ರಸ್ತೆ ಅಭಿವೃದ್ಧಿ ಹೊಂದಿದೆ. ಅಶೋಕ್ ರೈ ಬೇರೆ ಪಕ್ಷದಲ್ಲಿದ್ದರೂ ಕೋಮುವಾದಿ ಆಗಿರಲಿಲ್ಲ. ಪ್ರಮಾಣಿಕವಾಗಿ ಎಲ್ಲ ವರ್ಗದ ಜನರನ್ನು ಸಮಾನವಾಗಿ ನೋಡುತ್ತಿದ್ದು, ಈ ಬಾರಿ ಅವರನ್ನು ಬೆಂಬಲಿಸಬೇಕು ಎಂದರು.

ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಮ್ ಕೆ.ಬಿ ಮಾತನಾಡಿ ಭ್ರಷ್ಟ ಬಿಜೆಪಿ ಸರಕಾರವನ್ನು ಬೇರು ಸಹಿತ ಕಿತ್ತೆಸೆಯಬೇಕು. ಮೇ ೮ ರಂದು ಪುತ್ತೂರಿನಲ್ಲಿ ಕಾಂಗ್ರೆಸ್ ರೋಡ್ ಶೋ ನಡೆಯಲಿದ್ದು, ಸ್ಟಾರ್ ಪ್ರಚಾರಕಿ ರಮ್ಯ ಭಾಗವಹಿಸಲಿದ್ದು, ಎಲ್ಲರೂ ಭಾಗವಹಿಸಬೇಕು ಎಂದರು.

ಕಾವು ಹೇಮನಾಥ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಮಾನಾಥ್ ಶೆಟ್ಟಿ ಪೆರ್ನೆ, ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಅಧ್ಯಕ್ಷ ಶುಭಾಸ್ ಚಂದ್ರ ಶೆಟ್ಟಿ ಕುಳಾಲು, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ಕೊಲ್ಯ ಶ್ರೀನಿವಾಸ್ ಶೆಟ್ಟಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಉಸ್ತುವಾರಿ ಮಹೇಶ್ ಅಂಕೊತ್ತಿಮಾರ್, ಜಿಲ್ಲಾ ಪ್ರಚಾರ ಸಮಿತಿ ಜಂಟಿ ಸಂಯೋಜಕರುಗಳಾದ ವೇದನಾತ್ ಸುವರ್ಣ, ವಿ ಕೆ ಎಂ ಅಶ್ರಫ್, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ರಮಾನಾಥ್ ವಿಟ್ಲ, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಹಸೈನಾರ್ ನೆಲ್ಲಿಗುಡ್ಡೆ, ಲತಾವೇಣಿ ಅಶೋಕ್ ಪೂಜಾರಿ, ಡೀಕಯ್ಯ ಸುರಲಿಮೂಲೆ, ಪದ್ಮಿನಿ, ಬೂತ್ ಅಧ್ಯಕ್ಷರುಗಳಾದ ವಹಿದ್ ಬಿ, ಜೋನ್ಸನ್, ಅಶೋಕ್ ಪೂಜಾರಿ ಎನ್ ಎಸ್ ಡಿ.ಪ್ರಮುಖರಾದ ಮಂಜಲಾಡಿ ಗುತ್ತಿನ ಲಕ್ಷ್ಮಣ್ ಗೌಡ, ಇಕ್ಬಾಲ್ ಹೊನೆಸ್ಟ್, ರಶೀದ್ ವಿ ಎ, ಅಝೀಜ್, ಶ್ರೀಚರಣ್ ಶೆಟ್ಟಿ ಪಲೇರಿ, ರಾಜೇಶ್ ಮೊಂತೇರೋ, ಅಬ್ಬಾಸ್ ದಾಸರಬೆಟ್ಟು, ವಿ ಕೆ ಎಂ ಹಂಝ, ಹನೀಫ್ ಎಚ್ ಎಸ್, ಅಬ್ಬು ನವಗ್ರಾಮ, ಕರುಣಾಕರ ನೆಲ್ಲಿಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.
,,,,,,,,,

Leave a Reply

Your email address will not be published. Required fields are marked *

error: Content is protected !!