ಪುತ್ತೂರು: ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಪರವಾದ ಸಭೆಯೊಂದರಲ್ಲಿ ಶ್ರೀ ಕೃಷ್ಣ ಉಪಾಧ್ಯಾಯರಿಂದ ಪಾಟ್ರಕೋಡಿ ಮಸೀದಿ ವಿಚಾರವಾಗಿ ಇಲ್ಲಸಲ್ಲದ ಆರೋಪ: ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪುತ್ತೂರು ಚುನಾವಣಾಧಿಕಾರಿಗೆ ದೂರು
ಪುತ್ತೂರು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಪರವಾದ ಸಭೆಯೊಂದರಲ್ಲಿ ಶ್ರೀ ಕೃಷ್ಣ ಉಪಾಧ್ಯಾಯ ಎನ್ನುವವರು ಪಾಟ್ರಕೋಡಿ ಮಸೀದಿ ವಿಚಾರವನ್ನೆತ್ತಿ ಕೋಮು ಪ್ರಚೋದನಕಾರಿಯಾಗಿ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಭಾಷಣ ಮಾಡಿದ್ದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪಾಟ್ರಕೋಡಿ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಉಮರ್ ಹಾಜಿ ನೇತೃತ್ವದ ನಿಯೋಗ ಪುತ್ತೂರು ಚುನಾವಣಾಧಿಕಾರಿಗೆ ಮೇ.1ರಂದು ದೂರು ನೀಡಿದ್ದಾರೆ.
ಪುತ್ತೂರು, ತಾಲೂಕಿನ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಅರುಣ್ ಪುತ್ತಿಲರವರ ಚುನಾವಣಾ ಪ್ರಚಾರವನ್ನು ಮಾಡುವ ವೇಳೆ ಅವರ ಬೆಂಬಲಿಗರಾದ ಶ್ರೀ ಕೃಷ್ಣ ಉಪಾಧ್ಯಾಯ ಎಂಬವರು ಅರುಣ್ ಪುತ್ತಿಲ ಮತ್ತಿತರರು ಇರುವ ವೇದಿಕೆಯಲ್ಲಿರುವ ಸಮಯದಲ್ಲಿ ಭಾಷಣವನ್ನು ಮಾಡುತ್ತಾ ನಮ್ಮ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ “ಮಂಗಳೂರಿನಿಂದ ಮತಾಂಧನೊಬ್ಬ ಹಿಂದು ಹೆಣ್ಣನ್ನು ಅಪಹರಿಸಿಕೊಂಡು ಹೋಗುತ್ತಿರುವಲ್ಲಿ ಹಿಂದು ಸಂಘಟನೆಯ ಕಾರ್ಯಕರ್ತನೊಬ್ಬ ಇದನ್ನು ಕಂಡು ಹಿಂಬಾಲಿಸಿದಾಗ ಆತ ತನ್ನನ್ನು ತಪ್ಪಿಸಿಕೊಳ್ಳಲು ಪಾಟ್ರಕೋಡಿ ಮಸೀದಿಗೆ ನುಗ್ಗಿದ. ಈ ವಿಷಯವನ್ನರಿತ ಅರುಣ್ ಮತ್ತಿಲರವರು ಕೆಲವೇ ಘಂಟೆಗಳಲ್ಲಿ ಸ್ಥಳಕ್ಕೆ ಧಾವಿಸಿ ಶುಕ್ರವಾರ, ದಿನವಾದ ಅಂದು ಮುಸಲ್ಮಾನರೆಲ್ಲ ಜಮಾಯಿಸಿದ ಮಸೀದಿಯ ಒಳಗೆ ನುಗ್ಗಿ ಸಂಜೆ 4ಗಂಟೆಯ ಒಳಗಡೆ ಪೋಲಿಸ್ ಸ್ಟೇಷನ್‌ನಲ್ಲಿ ಆತ ಮತ್ತು ಅಪಹರಿಸಿರುವ ಆಕೆಯನ್ನು ಶರಣಾಗತಿ ಮಾಡಿ, ಇಲ್ಲದಿದ್ದಲ್ಲಿ ನಿಮ್ಮ ಮಸೀದಿ ಧಗಧಗನೆ ಉರಿಯುತ್ತದೆ ಎಂದು ಅವಾಜ್ ಹಾಕಿದವರು- ಇದೇ ಪುತ್ತಿಲ” ಎಂದು ಭಾಷಣದಲ್ಲಿ ಹೇಳಿರುತ್ತಾರೆ. ಈ ಭಾಷಣವು ಮಾಧ್ಯಮ, ಸಾಮಾಜಿಕ ತಾಣದಲ್ಲಿ ಪ್ರಚುರಪಡಿಸಲ್ಪಟ್ಟಿದ್ದು ಸದ್ರಿ ಈ ಭಾಷಣವನ್ನು ಬಿತ್ತರಿಸಿದ ವಿಡಿಯೋ ತುಣುಕಿನ ಸಿ.ಡಿಯನ್ನು ಇದರೊಂದಿಗೆ ಲಗೀಕರಿಸಿದ್ದೇನೆ.
ಮೇಲ್ಕಾಣಿಸಿದ ಶ್ರೀ ಕೃಷ್ಣ ಉಪಾಧ್ಯಾಯರವರು ಭಾಷಣ ಮಾಡಿರುವಂತಹ ಪ್ರಕರಣ ನಮ್ಮ ಮಸೀದಿಯಲ್ಲಿ, ಅಥವಾ ನಮ್ಮ ಪಾಟ್ರಕೋಡಿ ಪರಿಸರದಲ್ಲಿ ಯಾವತ್ತೂ ನಡೆದಿರುವುದಿಲ್ಲ. ಇಂತಹ ಪ್ರಕರಣವನ್ನು ಸೃಷ್ಟಿಸಿ ಹಿಂದು ಮುಸಲ್ಮಾನರ ಮಧ್ಯೆ ದ್ವೇಷವನ್ನು ಸೃಷ್ಟಿಸುವ ಉದ್ದೇಶದಿಂದ ಮಾಡಿರುವುದಾಗಿದೆ. ಇಂತಹ ಕಪೋಲಕಲ್ಪಿತ ವಿಷಯಗಳನ್ನು ಸೃಷ್ಟಿ ಮಾಡಿ ಭಾಷಣದ ಮೂಲಕ ಹೇಳಿರುವುದರಿಂದ ನಮ್ಮ ಪರಿಸರದ ಮುಸಲ್ಮಾನ ಸಮುದಾಯದವರಿಗೆ ತೀರ ನೋವಾಗಿರುತ್ತದೆ.
ಚುನಾವಣಾ ಪ್ರಚಾರದಲ್ಲಿ ಕೋಮು ದ್ವೇಷಗಳನ್ನು ಬಿತ್ತಿ ಅಹಿತಕರ ಘಟನೆಗಳನ್ನು ಸೃಷ್ಟಿ ಮಾಡಿ ಶಾಂತಿ ಕದಡುವ ನಿಟ್ಟಿನಲ್ಲಿ ಭಾಷಣ ಮಾಡಿದ ಭಾಷಣಕಾರ ಕೆದಿಲ – ಕೃಷ್ಣ ಉಪಾಧ್ಯಾಯ ವಿರುದ್ಧ
ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ತಮ್ಮಲ್ಲಿ ಈ ಮೂಲಕ ಪ್ರಾರ್ಥನೆ. ಎಂದು ದೂರು ಮನವಿಯಲ್ಲಿ ಉಲ್ಲೇಖಸಲಾಗಿದೆ.