ಅನೈತಿಕ ಸಂಬಂಧಕ್ಕೆ ಮಹಿಳೆ ಸಾವು: ಪ್ರಿಯಕರನ ಬಂಧನ
ಬೆಂಗಳೂರು: ಅನೈತಿಕ ಸಂಬಂಧ ಹೊಂದಿದ್ದನ್ನು ಪ್ರಶ್ನಿಸಿ ಸಾಯುತ್ತೇನೆ ಎಂದು ಹೆದರಿಸಿದ ಮಹಿಳೆಯ ಕುಣಿಕೆ ಎಳೆದು ಕುರ್ಚಿಯನ್ನು ತಳ್ಳಿದ ಪರಿಣಾಮ ಮಹಿಳೆ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಬಸವೇಶ್ವರನಗರದಲ್ಲಿ ನಡೆದಿದೆ.
ಸರವಣ (35) ಮೃತ ಮಹಿಳೆ. ಈಕೆಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಸಹ ಗಣೇಶ್ (22) ಎಂಬ ಯುವಕನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಅಷ್ಟೇ ಅಲ್ಲದೇ ಯುವಕನಿಗೆ 50 ಸಾವಿರ ರೂ. ಹಣ ಹಾಗೂ ಒಂದು ಮನೆಯನ್ನೂ ಸಹ ಮಾಡಿಕೊಟ್ಟಿದ್ದಳು.
ಇಷ್ಟೆಲ್ಲಾ ಇದ್ದರೂ ಗಣೇಶ್ ಬೇರೆ ಹುಡುಗಿಯೊಂದಿಗೆ ಸಲುಗೆಯನ್ನು ಬೆಳೆಸಿಕೊಂಡಿದ್ದ. ಇದನ್ನು ತಿಳಿದ ಮಹಿಳೆ ಆತನನ್ನು ಮನೆಗೆ ಕರೆಸಿಕೊಂಡಿದ್ದಾಳೆ.
ಬಳಿಕ ಆತ ಸಲುಗೆ ಬೆಳೆಸಿಕೊಂಡಿರುವ ಹುಡುಗಿ ಯಾರೆಂದು ಪ್ರಶ್ನಿಸಿದ್ದಾಳೆ. ಅಲ್ಲದೇ ತಾನು ನೀಡಿದ ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದಾಳೆ. ಇದರಿಂದಾಗಿ ಇವರಿಬ್ಬರ ಮಧ್ಯೆ ಗಲಾಟೆ ನಡೆದಿದೆ.
ಈ ವೇಳೆ ಗಣೇಶ್ ಸಾಯುತ್ತೇನೆ ಎಂದು ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದ. ಇದನ್ನು ನೋಡಿದ ಮಹಿಳೆ ತಾನೂ ಕೂಡಾ ಸಾಯುವುದಾಗಿ ಕುಣಿಕೆ ಹಾಕಿಕೊಂಡಿದ್ದಾಳೆ.
ಈ ವೇಳೆ ಗಣೇಶ್ ಆಕೆಯ ಕುಣಿಕೆಯ ಹಗ್ಗ ಎಳೆದು ಕುರ್ಚಿಯನ್ನು ತಳ್ಳಿದ್ದಾನೆ. ಇದರಿಂದಾಗಿ ಕುಣಿಕೆ ಕುತ್ತಿಗೆಗೆ ಬಿಗಿದು ಮಹಿಳೆ ಸಾವನ್ನಪ್ಪಿದ್ದಾಳೆ.




