ಕೇರಳ: ಆರ್‌ಎಸ್‌ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣ:
ಮೂರು ಮಂದಿಯ ಬಂಧನ
ಪಾಲಕ್ಕಾಡ್: ಕೇರಳದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತ 27 ವರ್ಷದ ಪ್ರಮುಕ್ ಸಂಜಿತ್ ಸಾವಿಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.
ಆರೋಪಿಗಳನ್ನು ಸುಬೈರ್, ಸಲಾಂ ಮತ್ತು ಇಸಾಹಕ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕೇರಳದ ಪಾಲಕ್ಕಾಡ್ ಜಿಲ್ಲೆಯವರು.
ಕೇರಳದ ಪಾಲಕ್ಕಾಡ್‌ನ ಎಡಪ್ಪಲ್ಲಿ ಮೂಲದ ಆರ್‌ಎಸ್‌ಎಸ್ ಕಾರ್ಯಕರ್ತ ಪ್ರಮುಕ್ ಸಂಜಿತ್ ಅವರನ್ನು ನವೆಂಬರ್ 15 ರಂದು ಅವರ ಪತ್ನಿಯ ಎದುರೇ ಜನರ ಗುಂಪೊಂದು ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಪಾಲಕ್ಕಾಡ್-ತ್ರಿಶೂರ್ ರಾಷ್ಟ್ರೀಯ ಹೆದ್ದಾರಿ ಬಳಿಯ ಕಿನಾಸ್ಸೆರಿಯಲ್ಲಿ ಈ ಘಟನೆ ನಡೆದಿದೆ. ಸಂಜಿತ್ ದೇಹದ ಮೇಲೆ ಒಟ್ಟು 15 ಗಾಯಗಳಿದ್ದವು.
ಘಟನೆಯ ಒಂದು ದಿನದ ನಂತರ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೇರಳ ಮುಖ್ಯಸ್ಥ ಕೆ. ಸುರೇಂದ್ರನ್ ಅವರು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಭೇಟಿಯಾಗಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಹಸ್ತಾಂತರಿಸುವಂತೆ ಮನವಿ ಮಾಡಿದರು.
ದಾಳಿಕೋರರು ಪಾಲಕ್ಕಾಡ್‌ನಿಂದ ತ್ರಿಶೂರ್‌ಗೆ ಹೋಗಿ ಕಣ್ಣೂರು ಎಂಬ ಸ್ಥಳದಲ್ಲಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಕೊಯಮತ್ತೂರಿಗೆ ಮರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಲಕ್ಕಾಡ್-ತ್ರಿಶೂರ್ ರಾಷ್ಟ್ರೀಯ ಹೆದ್ದಾರಿಯ ಕಣ್ಣೂರು ನಿಂದ ಗೋಣಿಚೀಲಗಳಲ್ಲಿ ಸುತ್ತಿ ಹಾಕಲಾಗಿದ್ದ ನಾಲ್ಕು ಕತ್ತಿಗಳು ಪತ್ತೆಯಾಗಿವೆ. ಕತ್ತಿಗಳನ್ನು ಗೋಣಿಚೀಲದಲ್ಲಿ ಕಟ್ಟಿ ಕಣ್ಣೂರಿನ ಸರ್ವಿಸ್ ರಸ್ತೆಯ ಕಿರು ಸೇತುವೆಯ ಕೆಳಗೆ ಎಸೆದಿದ್ದಾರೆ. ಸ್ಥಳೀಯರೊಬ್ಬರಿಗೆ ಗೋಣಿಚೀಲ ಪತ್ತೆಯಾಗಿದೆ. ಕತ್ತಿಗಳ ಮೇಲೆ ರಕ್ತದ ಕಲೆಗಳಿದ್ದು, ಸ್ಥಳದಲ್ಲಿ ಬಿಳಿ ಬಣ್ಣದ ಕಾರು ಇರುವುದು ದೃಢಪಟ್ಟಿದೆ.





