ಮಂಗಳೂರು: ಸ್ನೇಹದೀಪ ಮಕ್ಕಳ ಮನೆಗೆ ದಿನಸಿ ಹಸ್ತಾಂತರ
ಮಂಗಳೂರು: ಹೈನೋದ್ಯಮಿ ಮೈಮೂನ ರಾಜ್‌ಕಮಲ್ ಹರೇಕಳ ಅವರ ಮೊಮ್ಮಗನ ಹುಟ್ಟುಹಬ್ಬ ಪ್ರಯುಕ್ತ ಮಂಗಳೂರಿನ ಬಿಜೈಯಲ್ಲಿರುವ ಸ್ನೇಹದೀಪ ಎಚ್‌ಐವಿ ಪೀಡಿತ ಮಕ್ಕಳ ಮನೆಗೆ ಒಂದು ತಿಂಗಳ ದಿನಸಿ ಹಾಗೂ ದಿನಬಳಕೆಯ ವಸ್ತುಗಳು, ಹಣ್ಣು ಭಾನುವಾರ ಹಸ್ತಾಂತರಿಸಿ ಹುಟ್ಟುಹಬ್ಬ ಆಚರಿಸಲಾಯಿತು.
ನರೇಗಾದ ಮಾಜಿ ಒಂಬುಡ್ಸ್‌ಮೆನ್ ಶೀನ ಶೆಟ್ಟಿ, ಸರ್ಕಾರದಿಂದ ಮಾಡಬೇಕಿದ್ದ ಕೆಲಸ ಸ್ನೇಹದೀಪ ಮಾಡುತ್ತಿದೆ. ಮಕ್ಕಳಿಗಾಗಿ ತಿಂಗಳಿಗೆ ಬೇಕಾಗುವಷ್ಟು ಆಹಾರ ಹಾಗೂ ಇತರ ಸಾಮಗ್ರಿ ನೀಡಿರುವ ಮೈಮೂನ ಅವರಂಥ ದಾನಿಗಳ ಅವಶ್ಯಕತೆಯಿದೆ ಎಂದರು.
ಆಕೃತಿ ಪ್ರಕಾಶನದ ಕಲ್ಲೂರು ನಾಗೇಶ್ ಮಾತನಾಡಿ, ಮಕ್ಕಳ ಸೇವೆ ಮಾಡುವುದು ಅತ್ಯಂತ ಕಷ್ಟಕರ, ದೈವೀ ಶಕ್ತಿಯಿದ್ದಲ್ಲಿ ಮಾತ್ರವೇ ಇಂಥ ಸೇವೆ ಸಾಧ್ಯ. ಮುಂದಿನ ದಿನಗಳಲ್ಲಿ ಸಂಸ್ಥೆಗೆ ತಮ್ಮಿಂದಾದ ಕೊಡುಗೆ ನೀಡುವುದಾಗಿ ತಿಳಿಸಿದರು.
ಸಮಾಜ ಸೇವಕ ಸುಧಾಕರ್ ನಾಯಕ್ ಅಸೈಗೋಳಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಒಂದಿಬ್ಬರು ಮಕ್ಕಳನ್ನು ಸಾಕುವುದೇ ಕಷ್ಟ, ಹೀಗಿರುವಾಗ ಎಚ್‌ಐವಿ ಪೀಡಿತ ಪುಟ್ಟ ಮಕ್ಕಳನ್ನು ಸಾಕುತ್ತಿರುವ ತಬಸ್ಸುಮ್ ಸೇವೆ, ಇವರಿಗಾಗಿ ಮಿಡಿಯುವ ಮೈಮೂನ ಅವರ ಸೇವೆ ಶ್ಲಾಘನೀಯ ಎಂದರು.
ಸಂಸ್ಥೆಯಲ್ಲಿ ಪ್ರಸ್ತುತ ೨೭ ಮಕ್ಕಳಿದ್ದು ಕಳೆದ ೧೩ ವರ್ಷಗಳಿಂದ ಬಾಡಿಗೆ ಮನೆಯಲ್ಲಿ ನಿರ್ವಹಿಸುತ್ತಿದ್ದೇವೆ. ಮೂಲ ಸೌಕರ್ಯ ಕಲ್ಪಿಸುವಂತೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಸ್ನೇಹದೀಪ ನಿರ್ದೇಶಕಿ ತಬಸ್ಸುಮ್ ತಿಳಿಸಿದರು.
ಈ ಸಂದರ್ಭ ಮರ್ಝೀನ ರಾಜ್‌ಕಮಲ್, ಅಶ್ಫಿಯಾ, ಪ್ರಶಾಂತ್, ಸ್ನೇಹದೀಪದ ಅರ್ಷದ್, ಹರೇಕಳ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಸತ್ತಾರ್ ಉಪಸ್ಥಿತರಿದ್ದರು.




