ಪುತ್ತೂರು: ಜೆಡಿಎಸ್ ಪಕ್ಷದ ಅಧ್ಯಕ್ಷರೇ ಬಂಡಾಯ ಅಭ್ಯರ್ಥಿ: ದಿವ್ಯ ಪ್ರಭಾ ಗೌಡ ಚಿಲ್ತಡ್ಕಗೆ ಟಿಕೆಟ್ ನೀಡಿದ್ದಕ್ಕೆ ಭಾರೀ ಆಕ್ರೋಶ
ಪುತ್ತೂರು ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಅವರು ಟಿಕೆಟ್ ಸಿಗದೇ ಇರುವುದಕ್ಕೆ ಅಸಮಾಧಾನಗೊಂಡು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಪಕ್ಷದಿಂದ ಟಿಕೆಟ್ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ನನಗೆ ಅವಕಾಶ ನೀಡದೇ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರಿರುವ ದಿವ್ಯ ಪ್ರಭಾ ಗೌಡ ಚಿಲ್ತಡ್ಕರಿಗೆ ಪುತ್ತೂರು ಕ್ಷೇತ್ರದಲ್ಲಿ ಪಕ್ಷದ ಟಿಕೆಟ್ ನೀಡಿರುವುದು ಸರಿಯಲ್ಲ. ಇದರಿಂದ ಬೇಸತ್ತು ಈ ನಿರ್ಧಾರ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಕಳೆದ 31 ವರ್ಷಗಳಿಂದ ಪಕ್ಷ ಸಂಘಟಿಸಿದ ನಾನು ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದೆ ಆದರೆ ನನಗೆ ಟಿಕೆಟ್ ಸಿಗದೇ ಇರುವುದು ಬೇಸರವಾಗಿದೆ.
ಮೂರು ಬಾರಿ ನನಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವಿತ್ತಾದರೂ ನಾಯಕರ ಕೋರಿಕೆಯ ಮೇರೆಗೆ ಒಕ್ಕಲಿಗ ಸಮುದಾಯದ ಅಭ್ಯರ್ಥಿಗೆ ಸ್ಥಾನ ಬಿಟ್ಟುಕೊಟ್ಟಿದ್ದೆ. ನಾನು ಎಲ್ಲ ಸಮುದಾಯವನ್ನು ಗೌರವಿಸುವ ವ್ಯಕ್ತಿ. ಈ ಬಾರಿ ನನ್ನ ಹೆಸರು ಪುತ್ತೂರಿನಿಂದ ಜಿಲ್ಲಾಧ್ಯಕ್ಷರಿಗೆ ಕಳುಹಿಸಲಾಗಿದ್ದು ನನಗೆ ಅವಕಾಶ ಸಿಗಬಹುದೆಂದು ನಿರೀಕ್ಷೆಯಿತ್ತು. ಆದರೆ ನನಗೆ ಈ ಬಾರಿಯೂ ಅವಕಾಶ ನಿರಾಕರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪುತ್ತೂರಿನಲ್ಲಿ 51 ಸಾವಿರ ಮುಸ್ಲಿಂ ಮತದಾರರಿದ್ದು ಅತೀ ಹೆಚ್ಚು ಮತದಾರರಿರುವ ಸಮುದಾಯಕ್ಕೆ ಅನ್ಯಾಯ ಆಗಿದೆ. ಅದಕ್ಕಾಗಿ ನಾನು ಮುಸ್ಲಿಂ ಸಮುದಾಯದ ಮುಖಂಡರ ಜೊತೆ, ಪಕ್ಷದ ಕಾರ್ಯಕರ್ತರ ಜೊತೆ ಹಾಗೂ ಹಿತೈಷಿಗಳ ಜೊತೆ ಮಾತುಕತೆ ನಡೆಸಿ ಅವರ ಅಭಿಪ್ರಾಯ ಪಡೆದು ಅವರ ಒತ್ತಾಯದ ಮೇರೆಗೆ ಎ.17 ಅಥವಾ 18ರಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಅಶ್ರಫ್ ಕಲ್ಲೇಗ ತಿಳಿಸಿದ್ದಾರೆ.





