ಹಿಂದೂಗಳು ಮತ್ತು ಮುಸ್ಲಿಮರು “ಸಹೋದರರು ಮತ್ತು ಸಹೋದರಿಯರಂತೆ” ಬದುಕಬೇಕು: ಬಿ.ಎಸ್ ಯಡಿಯೂರಪ್ಪ
ಬೆಂಗಳೂರು: ಹಿಂದೂಗಳು ಮತ್ತು ಮುಸ್ಲಿಮರು “ಸಹೋದರರು ಮತ್ತು ಸಹೋದರಿಯರಂತೆ” ಬದುಕಬೇಕು. ಇತ್ತೀಚೆಗೆ ಕರ್ನಾಟಕವನ್ನು ಬೆಚ್ಚಿಬೀಳಿಸಿದ್ದ ಹಿಜಾಬ್ ಮತ್ತು ಹಲಾಲ್ ವಿವಾದಗಳು ಅನಗತ್ಯ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಪಕ್ಷವು ಹಿಜಾಬ್ ಮತ್ತು ಹಲಾಲ್ ಸಮಸ್ಯೆಯನ್ನು ಹೇಗೆ ನಿರ್ವಹಿಸಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ಅಂತಹ ವಿಷಯಗಳನ್ನು ಬೆಂಬಲಿಸಲು ಹೋಗುವುದಿಲ್ಲ. ನನ್ನ ಪ್ರಕಾರ ಹಿಂದೂಗಳು ಮತ್ತು ಮುಸ್ಲಿಮರು ಸಹೋದರ ಸಹೋದರಿಯರಂತೆ ಬಾಳಬೇಕು. ಮೊದಲಿನಿಂದಲೂ ನಾನು ಈ ನಿಲುವು ತಳೆದಿದ್ದೇನೆ. ಇವು ಅಗತ್ಯವಿಲ್ಲದ ಸಮಸ್ಯೆಗಳಾಗಿದ್ದವು. ನಾನು ಅಂತಹ ವಿಷಯಗಳನ್ನು ಬೆಂಬಲಿಸುವುದಿಲ್ಲ” ಎಂದು ಹೇಳಿದ್ದಾರೆ.
ಮೇ 10 ರಂದು ನಡೆಯಲಿರುವ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಯಡಿಯೂರಪ್ಪನವರ ಈ ಹೇಳಿಕೆಗಳು ಬಂದಿವೆ. ಕರ್ನಾಟಕದ ಕಾಲೇಜು ಆವರಣದಲ್ಲಿ ಹಿಜಾಬ್ ಧರಿಸಲು ಬಯಸುತ್ತಿರುವ ವಿದ್ಯಾರ್ಥಿಗಳ ವಿರುದ್ಧ ದನಿಯೆತ್ತಿದ್ದ ಯಶ್ಪಾಲ್ ಸುವರ್ಣ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಅದಾಗ್ಯೂ, ಬಿಎಸ್‌ವೈ ಈ ವಿವಾದಗಳ ಅನಗತ್ಯ ಎಂದಿದ್ದಾರೆ. ಇದು ತೀವ್ರ ಕುತೂಹಲ ಹುಟ್ಟಿಸಿದೆ.
ಕಳೆದ ವರ್ಷ ಯುಗಾದಿ ವೇಳೆ ಹಿಂದೂಗಳು ಹಲಾಲ್ ಮಾಂಸವನ್ನು ಬಹಿಷ್ಕರಿಸಲು ಹಿಂದುತ್ವವಾದಿಗಳು ಕರೆ ಕೊಟ್ಟಿದ್ದರು, ಅಲ್ಲದೆ ದೇವಸ್ಥಾನ ಆವರಣದಲ್ಲಿ ಮುಸ್ಲಿಂ ಮಾರಾಟಗಾರರಿಗೆ ಅವಕಾಶ ಇಲ್ಲದಂತೆ ಬಲಪಂಥೀಯರು ಅಭಿಯಾನ ನಡೆಸಿದ್ದರು. ಇದಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸೇರಿದಂತೆ ಹಲವು ಬಿಜೆಪಿ ನಾಯಕರು ಬೆಂಬಲ ನೀಡಿದ್ದರು. ಇದೀಗ ಬಿಎಸ್‌ವೈ ಇದಕ್ಕೆಲ್ಲಾ ತನ್ನ ಬೆಂಬಲವಿಲ್ಲ ಎಂದಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಹ್ವಾನದ ಹೊರತಾಗಿಯೂ ಚರ್ಚ್ ಕಾರ್ಯಕ್ರಮಗಳಿಗೆ ಹಾಜರಾಗದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ನಾನು ಕ್ರಿಶ್ಚಿಯನ್ ಮತ್ತು ಮುಸ್ಲಿಂ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ. ಇತರ ಸಮುದಾಯದ ಕಾರ್ಯಕ್ರಮಗಳಿಗೆ ಸಹ ಹೋಗುತ್ತಿದ್ದೆ. ಬೊಮ್ಮಾಯಿ ಕೂಡ ಹೋಗುತ್ತಿದ್ದರು. ಅವರು ಆಹ್ವಾನಿಸಿದ್ದರೆ ಬೊಮ್ಮಾಯಿ ಹೋಗಬೇಕಾಗಿತ್ತು. ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಮಹತ್ವ ನೀಡಬೇಕು. ಅವರು ಅಂತಹ ಕಾರ್ಯಕ್ರಮಗಳಿಗೆ ಹೋಗಬೇಕು ಎಂದು ಹೇಳಿದ್ದಾರೆ.




