September 20, 2024

ಸುಳ್ಯ:ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿವಾದ: ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಜಿ ಹಾಗೂ ಟಿಕೆಟ್ ವಂಚಿತ ಹೆಚ್. ಎಂ ನಂದಕುಮಾರ್ ಜತೆ ಬೆಂಗಳೂರಿನಲ್ಲಿ ಮಾತುಕತೆ ನಡೆಸಿದ ಡಿಕೆಶಿ: ಬಿ ಫಾರಂ ವಿತರಣೆ ಪೆಂಡಿಂಗ್

0

ಸುಳ್ಯ: ವಿಧಾನ ಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಜಿ ಹಾಗೂ ಟಿಕೆಟ್ ವಂಚಿತ ಹೆಚ್. ಎಂ ನಂದಕುಮಾರ್ ನಡುವೆ ಬೆಂಗಳೂರಿನಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತುಕತೆ ನಡೆಸಿದ್ದು, ಸುಳ್ಯದ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಗೊಂದಲ ನಿವಾರಣೆಯ ನಿಟ್ಟಿನಲ್ಲಿ ಸಭೆ ನಡೆಸಿ ವರದಿ ನೀಡುವಂತೆ ಮಾಜಿ ಸಚಿವ, ಜಿಲ್ಲೆಯ ಕಾಂಗ್ರೆಸ್ ಮುಖಂಡ ರಮಾನಾಥ ರೈಯವರಿಗೆ ಡಿ.ಕೆ. ಶಿವಕುಮಾರ್ ಸೂಚಿಸಿರುವುದಾಗಿ ತಿಳಿದು ಬಂದಿದೆ.

ಕಾಂಗ್ರೆಸ್ ಟಿಕೆಟ್ ಕೃಷ್ಣಪ್ಪರಿಗೆ ಘೋಷಣೆ ಯಾದ ಬಳಿಕ ಒಂದಷ್ಟು ವಿದ್ಯಮಾನಗಳು ನಡೆದವು. ನಂದಕುಮಾರ್ ಅಭಿಮಾನಿಗಳು ನಂದಕುಮಾರ್ ರಿಗೆ ಬಿ ಫಾರಂ ಸಿಗದಿದ್ದರೆ ಪಕ್ಷೇತರ ಸ್ಪರ್ಧೆಗೂ ನಿರ್ಧರಿಸಿದ್ದರು.

ಸುಳ್ಯ ಕಾಂಗ್ರೆಸ್ ನಲ್ಲಿ ಎರಡು ತಂಡಗಳಾಗಿ ಚುನಾವಣೆಯಲ್ಲಿ ಹಿನ್ನಡೆಯಾಗಬಹುದೆಂಬುವ ಸಂದೇಶವು ಕೆಪಿಸಿಸಿ ಗೆ ತಲುಪಿತ್ತು. ಈ ಸಮಸ್ಯೆ ಪರಿಹಾರಕ್ಕೂ ಸುಳ್ಯದ ಕೆಲವು ಮುಖಂಡರು ಕೇಳಿಕೊಂಡಿದ್ದರು.

ಇಂದು‌ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಚುನಾವಣಾ ಉಸ್ತುವಾರಿ ಎಂ.ವೆಂಕಪ್ಪ ಗೌಡ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಕೆ.ಪಿ.ಸಿ.ಸಿ. ವಕ್ತಾರ ಟಿ.ಎಂ. ಶಹೀದ್ ನೇತೃತ್ವದಲ್ಲಿ ಸುಳ್ಯ ಹಾಗೂ ಕಡಬ ಬ್ಲಾಕ್ ಅಧ್ಯಕ್ಷರನ್ನೊಳಗೊಂಡು ಕೃಷ್ಣಪ್ಪ ಹಾಗೂ ನಂದಕುಮಾರ್ ಬಳಗದ ಎರಡೂ‌ ಕಡೆಯವರು ಬೆಂಗಳೂರಿಗೆ ತೆರಳಿದ್ದರು.

ಅಲ್ಲಿ‌ ಸಂಜೆ ಡಿ.ಕೆ. ಶಿವಕುಮಾರ್ ರವರು ಕೃಷ್ಣಪ್ಪ ಜಿ ಹಾಗೂ ನಂದಕುಮಾರ್ ಹಾಗೂ ಸುಳ್ಯದಿಂದ ಜತೆಯಲ್ಲಿ ತೆರಳಿದವರ ಜತೆ ಮಾತುಕತೆ ನಡೆಸಿದರು. ಈ ಮಾತುಕತೆಯ ನೇತೃತ್ವ ವಹಿಸಿದ ನಾಯಕರು ಸುಳ್ಯದಲ್ಲಿ ಆಗಿರುವ ಘಟನೆಯನ್ನೂ‌ ಮುಂದಿಟ್ಟರು. ನಿಯೋಗದ ಅಹವಾಲು ಕೇಳಿದ ಬಳಿಕ ಮಾಜಿ ಸಚಿವ ಬಿ ರಮಾನಾಥ ರೈಯವರಿಗೆ ದೂರವಾಣಿ‌ ಕರೆ ಮಾಡಿದ ಡಿ.ಕೆ.ಶಿ. ಯವರು ತಾವು ಶೀಘ್ರ ವೇ ಸುಳ್ಯಕ್ಕೆ ಹೋಗಿ ಅಲ್ಲಿಯ ವಸ್ತು ಸ್ಥಿತಿ ವರದಿ ಮಾಡುವಂತೆ ಸೂಚಿಸಿದರೆಂದೂ ತಿಳಿದು ಬಂದಿದೆ.
ರಮಾನಾಥ ರೈಯವರು ಸಭೆ ನಡೆಸಿ ವರದಿ ನೀಡಿದ ಬಳಿಕ ನಾನು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ.‌ ಅದುವರೆಗೆ ಬಿ ಫಾರಂ ವಿತರಣೆ ಪೆಂಡಿಂಗ್ ಇರಿಸುತ್ತೇನೆ. ಅದಕ್ಕೆ ಎಲ್ಲರೂ ಒಪ್ಪಿಕೊಳ್ಳಬೇಕೆಂದು ಡಿಕೆಶಿ ಯವರು ಬೆಂಗಳೂರಿಗೆ ತೆರಳಿದ ನಾಯಕರಿಗೆ ಸೂಚನೆ ನೀಡಿದರೆಂದೂ ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!