ನೆಲ್ಯಾಡಿ: ಡೈನೇಜ್ ಗುಂಡಿಗೆ ಬಿದ್ದ ವೃದ್ಧ: ಆಸ್ಪತ್ರೆಗೆ ದಾಖಲು
ನೆಲ್ಯಾಡಿ: ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಡೈನೇಜ್‌ಗೆ ಬಿದ್ದು ವೃದ್ಧರೋರ್ವರು ತೀವ್ರವಾದ ಗಾಯಗೊಂಡಿರುವ ಘಟನೆ ನೆಲ್ಯಾಡಿಯಲ್ಲಿ ಎ.10ರಂದು ಮಧ್ಯಾಹ್ನ ನಡೆದಿದೆ.
ನೆಲ್ಯಾಡಿ ಗ್ರಾಮದ ಕುರುಬರಕೇರಿ ನಿವಾಸಿ ಬಾಬು ಗಾಯಗೊಂಡವರು. ನೆಲ್ಯಾಡಿ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ಪೇಟೆಯ ಎರಡೂ ಬದಿಯೂ ಇರುವ ಡ್ರೈನೇಜ್‌ಗೆ ಕಾಂಕ್ರಿಟ್ ತಡೆಗೋಡೆ ಮಾಡಿ ಕಾಂಕ್ರಿಟ್ ಸ್ಲ್ಯಾಬ್ ಹಾಕಿ ಮುಚ್ಚಲಾಗಿದೆ. ಆದರೆ ಅಲ್ಲಲ್ಲಿ ಮಧ್ಯದಲ್ಲಿ ಡ್ರೈನೇಜ್ ಮುಚ್ಚದೇ ಓಪನ್ ಬಿಡಲಾಗಿದೆ.
ಬಾಬು ಅವರು ಡ್ರೈನೇಜ್ ಸ್ಲ್ಯಾಬ್ ಮೇಲೆ ನಡೆದುಕೊಂಡು ಬಂದವರು ನೆಲ್ಯಾಡಿ ಸೂರ್ಯ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಕೆ ಎನ್ ಆರ್ ಕಾಮಗಾರಿಯ ಗುತ್ತಿಗೆದಾರರು ಅಗಲವಾದ ಗುಂಡಿ ನಿರ್ಮಿಸಿ ಸ್ಲ್ಯಾಬ್ ಅಳವಡಿಸದೇ ಇರುವುದು ಅರಿವಿಗೆ ಬಾರದೇ ಆಕಸ್ಮಿಕವಾಗಿ ಡ್ರೈನೇಜ್ ಒಳಕ್ಕೆ ಬಿದ್ದಿದ್ದಾರೆ.
ಸುಮಾರು ನಾಲ್ಕೈದು ಅಡಿ ಆಳ ಇರುವ ಈ ಗುಂಡಿಗೆ ಬಿದ್ದಿದ್ದ ಬಾಬು ಅವರನ್ನು ಸ್ಥಳೀಯರು ಮೇಲಕ್ಕೆತ್ತಿ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.
ಬಾಬು ಅವರ ತಲೆ ಹಾಗೂ ದೇಹದ ಇತರ ಭಾಗಗಳಿಗೆ ತೀವ್ರವಾದ ಗಾಯವಾಗಿದೆ ಎಂದು ವರದಿಯಾಗಿದೆ. ಎರಡು ದಿನದ ಹಿಂದೆ ಇದೆ ಹೊಂಡಕ್ಕೆ ಇನ್ನೊಬ್ಬರು ಬಿದ್ದು ಗಾಯಗೊಂಡ ಘಟನೆ ನಡೆದಿದೆ




