ಇದ್ರೀಸ್ ಪಾಷಾ ಕೊಲೆ ಪ್ರಕರಣ: FIR ದಾಖಲಾಗಿದ್ದರೂ ಆರೋಪಿ ಪುನೀತ್ ಕೆರೆಹಳ್ಳಿನನ್ನು ಬಂಧಿಸದ ಪೊಲೀಸರು
ರಾಮನಗರ: ‘ಇದ್ರೀಷ್ ಪಾಷ ಸಾವು ವಿಚಾರದಲ್ಲಿ ನನ್ನ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೆ ವಿಚಾರಣೆ ಎದುರಿಸುತ್ತೇನೆ. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ’ ಎಂದು ಪ್ರಕರಣದ ಪ್ರಮುಖ ಆರೋಪಿ, ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಪುನೀತ್ ಕೆರೆಹಳ್ಳಿ ಹೇಳಿದ್ದಾರೆ.
ಈ ಬಗ್ಗೆ ಪುನೀತ್ ಮಾತ ನಾಡಿರುವ ವಿಡಿಯೊ ಒಂದು ಸೋಮವಾರ ರಾತ್ರಿ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ. ‘ಅನೇಕ ದೇವಸ್ಥಾನಗಳಿಗೆ ಭೇಟಿ ಕೊಡುತ್ತಿದ್ದು, ಈ ಸಂದರ್ಭದಲ್ಲಿ ನನ್ನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಹೀಗಾಗಿ, ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಮಾಹಿತಿ ಬಂದರೆ ನಾನೇ ಖುದ್ದು ಪೊಲೀಸರ ಮುಂದೆ ಬರುತ್ತೇನೆ’ ಎಂದು ಅವರು ಹೇಳಿದ್ದಾರೆ.
‘ಶುಕ್ರವಾರ ಮಧ್ಯರಾತ್ರಿ 11.59 ರಿಂದ ನಾನು ಘಟನೆಯನ್ನು ಫೇಸ್ ಬುಕ್ ಲೈವ್ ಮಾಡಿದ್ದೇನೆ. ಶನಿವಾರ ಬೆಳಿಗ್ಗೆ 5ಕ್ಕೆ ಮಠಕ್ಕೆ ಹಸುಗಳನ್ನು ಬಿಡುವವರೆಗೂ ನಾನು ಪೊಲೀಸರ ಜೊತೆಯಲ್ಲೇ ಇದ್ದೆ. ನಾವು ಯಾರನ್ನೂ ಹತ್ಯೆ ಮಾಡಿಲ್ಲ. ಮರಣೋತ್ತರ ಪರೀಕ್ಷೆ ವರದಿಯೇ ಇದಕ್ಕೆ ಉತ್ತರ ನೀಡಲಿದೆ’ ಎಂದು ಅವರು ಹೇಳಿದ್ದಾರೆ.




