IPL 2023: ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದುಬೀಗಿದ ಗುಜರಾತ್ ಟೈಟನ್ಸ್
ಅಹಮದಾಬಾದ್ (ಪಿಟಿಐ): ಶುಭಮನ್ ಗಿಲ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟನ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಉದ್ಘಾಟನೆ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬಳಗ ಐದು ವಿಕೆಟ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿತು.
ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ, ಒಂಬತ್ತು ಸಿಕ್ಸರ್‌ಗಳನ್ನು ಸಿಡಿಸಿದ ಯುವಬ್ಯಾಟರ್ ಋತುರಾಜ್ ಗಾಯಕವಾಡ (92 ರನ್, 50 ಎ.) ಬ್ಯಾಟಿಂಗ್ ಬಲದಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 178 ರನ್ ಗಳಿಸಿತು.
ಕಳೆದ ಬಾರಿಯ ಚಾಂಪಿಯನ್ ಟೈಟನ್ಸ್ ತಂಡ ಇನ್ನೂ ನಾಲ್ಕು ಎಸೆತಗಳು ಇರುವಂತೆಯೇ ಐದು ವಿಕೆಟ್ ಕಳೆದುಕೊಂಡು ಗೆಲುವಿನ ಗಡಿ ದಾಟಿತು. 36 ಎಸೆತಗಳಲ್ಲಿ 63 ರನ್ ಗಳಿಸಿದ ಗಿಲ್ ಅವರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ವಿಜಯ್ ಶಂಕರ್, ರಾಹುಲ್ ತೆವಾಟಿಯಾ ಮತ್ತು ರಶೀದ್ ಖಾನ್ ಅವರು ಕೊನೆಯ ಓವರ್‌ಗಳಲ್ಲಿ ಬಿರುಸಿನ ಆಟವಾಡಿ ತಂಡದ ಗೆಲುವಿನ ಹಾದಿ ಸುಗಮಗೊಳಿಸಿದರು. ಟೈಟನ್ಸ್ ಗೆಲುವಿಗೆ ಕೊನೆಯ ಓವರ್‌ನಲ್ಲಿ ಎಂಟು ರನ್‌ಗಳು ಬೇಕಿದ್ದವು. ರಾಹುಲ್ ಅವರು ಸಿಕ್ಸರ್ ಮತ್ತು ಬೌಂಡರಿ ಹೊಡೆದು ಜಯ ತಂದಿತ್ತರು.
ಋತುರಾಜ್ ಮಿಂಚು: ಇದಕ್ಕೂ ಟಾಸ್ ಗೆದ್ದ ಟೈಟನ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅನುಭವಿ ಬೌಲರ್ ಮೊಹಮ್ಮದ್ ಶಮಿ ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿಯೇ ಡೆವೊನ್ ಕಾನ್ವೆ ವಿಕಟ್ ಕಬಳಿಸಿದರು. ಇದರಿಂದ ಗುಜರಾತ್ ಬಳಗದಲ್ಲಿ ಸಂಭ್ರಮ ಗರಿಗೆದರಿತು.