ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ; ವಿಟ್ಲದಲ್ಲಿ ಬಿರುಸಿನ ಮತದಾನ: ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ ಅಸಮಾಧಾನ
ವಿಟ್ಲ: ಕನ್ನಡ ಸಾಹಿತ್ಯ ಪರಿಷತ್ತಿಗೆ ಭಾನುವಾರ ಬಿರುಸಿನ ಮತದಾನ ನಡೆಯುತ್ತಿದೆ. ವಿಟ್ಲ ಹೋಬಳಿ ವ್ಯಾಪ್ತಿಯ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಿಗೆ ವಿಟ್ಲ ಪಟ್ಟಣ ಪಂಚಾಯತು ಕಛೇರಿಯಲ್ಲಿ ಮತದಾನ ನಡೆಯುತ್ತಿದ್ದು, ಮತದಾರರು ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಚಲಾಯಿಸಲು ಆಗಮಿಸುತ್ತಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಹುದ್ದೆಗೆ ದಾಖಲೆಯ 21 ಸದಸ್ಯರು ಚುನಾವಣೆಗೆ ನಿಂತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಪ್ರದೀಪ್ ಕುಮಾರ್ ಕಲ್ಕೂರ ಚುನಾವಣೆಯಲ್ಲಿ ಇರದೇ ಇರುವುದರಿಂದ ಇಬ್ಬರು ಸ್ಪರ್ಧಾಳುಗಳ ಮಧ್ಯೆ ಚುನಾವಣೆ ಗರಿಗೆದರಿದೆ. ಎಂ.ಆರ್. ವಾಸುದೇವ ಹಾಗೂ ಎಂ.ಪಿ. ಶ್ರೀನಾಥ್ ಜಿಲ್ಲಾಧ್ಯಕ್ಷ ಸ್ಥಾನದ ಕಣದಲ್ಲಿದ್ದಾರೆ.
ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ; ಮತದಾನ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ವಿಟ್ಲದ ಮತಗಟ್ಟೆಗೆ ಬಂದ ಬಿ. ಸತೀಶ್ ಆಳ್ವ ಕಡಂಬು ಅವರು ಮತದಾನ ಮಾಡದೇ ನಿರಾಶೆಯಿಂದ ಹಿಂತಿರುಗಿದ್ದಾರೆ. ಅವರ ಹೆಸರು ಮತದಾನ ಪಟ್ಟಿಯಲ್ಲಿರಲಿಲ್ಲ. ಬಂಟ್ವಾಳ ವ್ಯಾಪ್ತಿಯ ಪಟ್ಟಿ ಹೆಸರಿದ್ದು, ಬಂಟ್ವಾಳ ಮತಗಟ್ಟೆಗೆ ತೆರಳುವಂತೆ ಅಧಿಕಾರಿಗಳು ಅವರಿಗೆ ಸೂಚಿಸಿದ್ದಾರೆ. ಈ ಬಗ್ಗೆ ಸತೀಶ್ ಆಳ್ವ ಅವರು ಅಸಮಾಧಾನ ವ್ಯಕ್ತಪಡಿಸಿದರು.