ವಿಜಯಪುರ: ಕೇಂದ್ರ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
ವಿಜಯಪುರ : ಜಿಲ್ಲೆಯ ಪ್ರವಾಸದಲ್ಲಿದ್ದ ಕೇಂದ್ರ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಸಣ್ಣಪುಟ್ಟ ಗಾಯಗಳಾಗಿದ್ದರೂ ಸುದೈವಶಾತ್ ಯಾವುದೇ ಅಪಾಯವಾಗಿಲ್ಲ.
ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಗುರುವಾರ ಪಕ್ಷದ ಸಂಘಟನೆಗಾಗಿ ಜಿಲ್ಲೆಯ ಪ್ರವಾಸದಲ್ಲಿದ್ದರು.
ನಗರದಲ್ಲಿ ನಾಗಠಾಣ ಕ್ಷೇತ್ರದ ಮಹಿಳಾ ಮೋರ್ಚಾ ಕಾರ್ಯಕ್ರಮದ ಬಳಿಕ ಬಾಗಲಕೋಟೆ ಕಡೆಗೆ ಪ್ರಯಾಣ ಹೊರಟಿದ್ದರು.
ಸಂಜೆ 7 ಗಂಟೆ ಸುಮಾರಿಗೆ ವಿಜಯಪುರ ತಾಲೂಕಿನ ಜುಮನಾಳ ಗ್ರಾಮದ ಬಳಿ ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಸಚಿವೆ ಜ್ಯೋತಿ ಪ್ರಯಾಣಿಸುತ್ತಿದ್ದ ಕಾರಿಗೆ ಕ್ಯಾಂಟರ್ ಢಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಕೇಂದ್ರ ಸಚಿವೆ ಹಾಗೂ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕೂಡಲೇ ಗಾಯಾಳು ಕೇಂದ್ರ ಸಚಿವೆ ಸಾಧ್ವಿ ಜ್ಯೋತಿ ಹಾಗೂ ಅವರ ಕಾರು ಚಾಲಕನನ್ನು ನಗರದ ಜಿಲ್ಲಾ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಲಾಗಿದೆ.




