December 18, 2025

ಮಡಿಕೇರಿ: ಬುರ್ಖಾ ವಿಚಾರವಾಗಿ ಅನೈತಿಕ ಪೊಲೀಸ್ ಗಿರಿ, ಹಲ್ಲೆ: ಸಂಘಪರಿವಾರದ ಕಾರ್ಯಕರ್ತರಿಬ್ಬರ ಬಂಧನ

0
Screenshot_2021-11-20-11-19-10-24_680d03679600f7af0b4c700c6b270fe7.jpg

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತ್ತೊಂದು ನೈತಿಕ ಪೊಲೀಸ್‌ ಗಿರಿ ಪ್ರಕರಣ ಬೆಳಕಿಗೆ ಬಂದಿದ್ದು, ಬುರ್ಖಾ ವಿಚಾರವಾಗಿ ಗುಂಪೊಂದು ನಡೆಸಿದ ಗಲಾಟೆ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ.

ಮಡಿಕೇರಿಯ ಸೋಮವಾರಪೇಟೆ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಸಂಘಟನೆಯೊಂದಕ್ಕೆ ಸೇರಿದ 40ಕ್ಕೂ ಹೆಚ್ಚು ಮಂದಿ ಅನ್ಯಕೋಮಿನ ಯುವತಿಯರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ನವೆಂಬರ್ 18 ರ ಗುರುವಾರ ಸಂಜೆ ಶನಿವಾರಸಂತೆಯ ಕೆಆರ್‌ಸಿ ವೃತ್ತದಲ್ಲಿ, ಈ ಘಟನೆ ನಡೆದಿದೆ. ಇದೀಗ ಪೊಲೀಸರುಆರೋಪಿಗಳ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಪ್ರಕರಣದ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ಧಾರೆ ಎಂದು ವರದಿಯಾಗಿದೆ.

“ಗುರುವಾರ ಸಂಜೆ 4.15ರ ಸುಮಾರಿಗೆ ಶನಿವಾರಸಂತೆ ಸೇಕ್ರೆಡ್ ಹಾರ್ಟ್ ಶಾಲೆಯ ಪ್ರಥಮ ಪಿಯು ವಿದ್ಯಾರ್ಥಿಗಳ ಮೇಲೆ ಸಂಘಟನೆಯೊಂದಕ್ಕೆ ಸೇರಿದ 40ಕ್ಕೂ ಹೆಚ್ಚು ಮಂದಿಯ ತಂಡ ದಾಳಿ ನಡೆಸಿತ್ತು. ನನ್ನ ಮಗಳು ಹಾಗೂ ಆಕೆಯ ಸ್ನೇಹಿತೆಯ ಮೇಲೆ ಸಂಘಪರಿವಾರಕ್ಕೆ ಸೇರಿದ ಕೆಲ ಹುಡುಗರು ಹಲ್ಲೆ ನಡೆಸಿದ್ದಾರೆ.

ನನ್ನ ಮಗಳು ಗುರುವಾರ ಬೆಳಗ್ಗೆ ತನ್ನ ಕಾಲೇಜಿನ ತರಗತಿಗಳಿಗೆ ಹಾಜರಾಗಿದ್ದಳು. ತರಗತಿಗಳಿಗೆ ಹಾಜರಾಗುವ ಮೊದಲು ಆಕೆ ಬುರ್ಖಾವನ್ನು ತೆಗೆಯಬೇಕಿದ್ದು, ನನ್ನ ಮಗಳು ತನ್ನ ಬುರ್ಖಾವನ್ನು ತೆಗೆದು ಅದೇ ಕಾಲೇಜಿನ ಕ್ರಿಶ್ಚಿಯನ್ ಹುಡುಗಿಗೆ ಹಸ್ತಾಂತರಿಸಿದ್ದಳು, ಆ ದಿನ ಕ್ರಿಶ್ಚಿಯನ್ ಹುಡುಗಿ ಕಾಲೇಜಿಗೆ ಹಾಜರಾಗಿರಲಿಲ್ಲ. ಹಾಗಾಗಿ ಆಕೆಯ ಸ್ನೇಹಿತೆ ಸಂಜೆ ಕಾಲೇಜಿನ ಬಳಿ ಬುರ್ಖಾ ವಾಪಸ್ ಕೊಡಲು ಕಾಯುತ್ತಿದ್ದಳು.

ಆದರೆ ಬುರ್ಖಾ ವಾಪಸ್ ಕೊಡುವಾಗ 40ಕ್ಕೂ ಹೆಚ್ಚು ಗೂಂಡಾಗಳು ನನ್ನ ಮಗಳು ಹಾಗೂ ಆಕೆಯ ಸ್ನೇಹಿತೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಹೆಣ್ಣುಮಕ್ಕಳಿಗೆ ಬೀಗ ಜಡಿದು ಥಳಿಸಿ ದೌರ್ಜನ್ಯ ಎಸಗಿದ್ದಾರೆ” ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.

ಬಾಲಕಿಯ ಬುರ್ಖಾ ಹರಿದಿದ್ದು, ಬೆನ್ನಿನಲ್ಲಿ ಗೀರುಗಳು ಸೇರಿದಂತೆ ಗಾಯಗಳಾಗಿವೆ. ಬಳಿಕ ಬಾಲಕಿಯರನ್ನು ಕೊಡ್ಲಿಪೇಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಾಲಕಿಯರ ಕುಟುಂಬಸ್ಥರು ಪೊಲೀಸ್ ಎಫ್‌ಐಆರ್‌‌‌ ದಾಖಲಿಸಿದ್ದಾರೆ. ಶನಿವಾರಸಂತೆ ಠಾಣೆ ಪೊಲೀಸರು ಪೋಕ್ಸೊ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿದ್ದಾರೆ.

“ಶನಿವಾರಸಂತೆಯ ಪ್ರಜ್ವಲ್ ಮತ್ತು ಕೌಶಿಕ್ ಎಂಬವರನ್ನು ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿ ಹೆಚ್ಚಿನವರನ್ನು ಬಂಧಿಸಲಾಗುವುದು” ಎಂದು ಶನಿವಾರಸಂತೆ ಎಸ್‌ಐ ಪರಶಿವ ಮೂರ್ತಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!