ಮಂಗಳೂರು: ಬಿಜೆಪಿ ಸರ್ಕಾರದ ಅಲ್ಪಸಂಖ್ಯಾತ, ದಲಿತ ವಿರೋಧಿ ನೀತಿಯನ್ನು ಅಹಿಂದ ಜನ ಚಳುವಳಿ ಸಮಿತಿ ಖಂಡಿಸುತ್ತದೆ: ಸಮಿತಿ ಅಧ್ಯಕ್ಷ ಪದ್ಮನಾಭ ನರಿಂಗಾನ ವಾಗ್ದಾಳಿ
ಮಂಗಳೂರು: ಆಡಳಿತಾರೂಢ ಬಿಜೆಪಿ ಸರ್ಕಾರದ ಅಲ್ಪಸಂಖ್ಯಾತ, ದಲಿತ ವಿರೋಧಿ ನೀತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಅಹಿಂದ ಜನ ಚಳುವಳಿ ಸಮಿತಿ ಬಲವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷರಾದ ಪದ್ಮನಾಭ ನರಿಂಗಾನ ತಿಳಿಸಿದ್ದಾರೆ
ಈ ಕುರಿತು ಮಾತನಾಡಿದ ಅವರು, ಜನತೆ ಸರ್ವತೋಮುಖ ಅಭಿವೃದ್ಧಿಯ ಹಿತದೃಷ್ಟಿಯಿಂದ ನೋಡುವುದಾದರೆ ಕರ್ನಾಟಕ ಸರ್ಕಾರವು ಅಲ್ಪಸಂಖ್ಯಾತರ ಮುಸ್ಲಿಂ ಸಮುದಾಯವನ್ನು ಬಹಳಷ್ಟು ಕಡೆಗಣಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಕೇಂದ್ರ ಸರ್ಕಾರದಿಂದ ಪರಿಗಣಿಸಲ್ಪಟ್ಟ ಸಾಚಾರ್ ವರದಿಯ ಅನ್ವಯ ಹಿಂದಿನ ರಾಜ್ಯ ಸರ್ಕಾರವು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವಿವಿಧ ಜನಾಂಗದ ಅಭಿವೃದ್ಧಿಗಾಗಿ ಜಾರಿಗೊಳಿಸಿದ ಹಲವಾರು ಕಾರ್ಯಕ್ರಮಗಳು ಕ್ರಮೇಣ ಈಗಿನ ಸರ್ಕಾರ ಬಂದ ಬಳಿಕ ಕುಂಠಿತಗೊಂಡಿದೆ. ಉದಾಹರಣೆಗಾಗಿ ಅಲ್ಪಸಂಖ್ಯಾತರ ಸಮುದಾಯಗಳ ಶಿಕ್ಷಣಕ್ಕಾಗಿ ಈ ಹಿಂದೆ ನೀಡುತ್ತಿದ್ದ ಅನುದಾನದಲ್ಲಿ ಕುಂಠಿತವಾಗಿದ್ದು ಅರ್ಧಕ್ಕಿಂತಲೂ ಕಡಿಮೆ ಆಗಿರುತ್ತದೆ. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳಿಗೆ ಕೇಂದ್ರ ಸರ್ಕಾರ ದಿಂದ ಈ ಹಿಂದೆ ನೀಡುತ್ತಿದ್ದ ಸುಮಾರು 3500 ಕೋಟಿ ರೂಪಾಯಿಗಳ ಬಜೆಟ್ಟನ್ನು ಕಳೆದ ಸಾಲಿನಲ್ಲಿ ಕರ್ನಾಟಕಕ್ಕೆ ಸಂಬಂಧಿಸಿ ಸುಮಾರು 800ಕೋಟಿಗೆ ಕಡಿಮೆ ಗೊಳಿಸಿ ನಿಗದಿಗೊಳಿಸಿರುತ್ತಾರೆ. ಇದರಿಂದ ಅಲ್ಪಸಂಖ್ಯಾತರ ಶಾಲಾ ಕಾಲೇಜುಗಳಲ್ಲಿ ಹಾಗೂ ಇನ್ನಿತರ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಉನ್ನತ ಶಿಕ್ಷಣಕ್ಕೆ ಬಜೆಟಿನಲ್ಲಿ ಪೂರ್ತಿ ಅನುದಾನವನ್ನು ನೀಡದೆ ಅವರ ಶಿಕ್ಷಣವು ಕುಂಠಿತ ಗೊಂಡಿರುತ್ತದೆ .ಇದೂ ಅಲ್ಲದೆ ಸರ್ಕಾರದಿಂದ ಈ ಹಿಂದೆ ಲಭ್ಯವಾಗುತ್ತಿದ್ದ ಗ್ರಹ ನಿರ್ಮಾಣ ಸಾಲ ಹಾಗೂ ಸಹಾಯಧನ ಮಾತ್ರವಲ್ಲದೆ ಬ್ಯಾಂಕುಗಳಿಂದ ಪಡೆಯುವ ಸಾಲಕ್ಕೆ ದೊರೆಯುವ ಸಹಾಯಧನ, ಬಡವರಿಗೆ ಗೃಹ ನಿರ್ಮಾಣಕ್ಕಾಗಿ ನೀಡುತ್ತಿರುವ ಸಹಾಯಧನ ಮುಂತಾದ ಜನಸ್ನೇಹಿ ಕಾರ್ಯಕ್ರಮಗಳು ಕೂಡ ಕುಂಠಿತ ಕೊಂಡಿರುತ್ತದೆ. ಆದ್ದರಿಂದ ಇವೆಲ್ಲವುಗಳನ್ನು ತಕ್ಷಣದಿಂದಲೇ ಮುಂದುವರಿಸಲು ದಕ್ಷಿಣ ಕನ್ನಡ ಜಿಲ್ಲಾ ಅಹಿಂದ ಜನ ಚಳುವಳಿ ಒತ್ತಾಯಿಸುತ್ತದೆ. ಸರ್ಕಾರವು ಈ ಬಗ್ಗೆ ನಿರ್ಲಕ್ಷ್ಯ ತೋರಿದ್ದಲ್ಲಿ ಅದಕ್ಕಾಗಿ ಅಹಿಂದ ಜನ ಚಳುವಳಿ ಮುಖಾಂತರ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಅನಿವಾರ್ಯವಾಗಿ ಕೈಗೊಳ್ಳಲಾಗುತ್ತದೆ ಎಂದರು.
ಇನ್ನು ಇತ್ತೀಚೆಗೆ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳೂ ಪ್ರತಿಪಕ್ಷದ ನಾಯಕರೂ ಆದ ಗೌರವಾನ್ವಿತ ಶ್ರೀ ಸಿದ್ದರಾಮಯ್ಯರವರನ್ನು ಟಿಪ್ಪು ವನ್ನು ಹೊಡೆದುರುಳಿಸಿದಂತೆ ಹೊಡೆದುರುಳಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ರಾದ ಅಶ್ವಥ್ ನಾರಾಯಣರವರು ನೀಡಿರುವ ಹೇಳಿಕೆ ಹಿಂಸೆ ಮತ್ತು ಕೊಲೆಗೆ ಪ್ರಚೋದಿಸುವಂತದ್ದಾಗಿದ್ದು ಇದನ್ನು ಅಹಿಂದ ಜನ ಚಳುವಳಿ ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಅಹಿಂದ ಜನ ಚಳುವಳಿ ಅಧ್ಯಕ್ಷರಾದ ಪದ್ಮನಾಭ ನರಿಂಗಾನ, ಪ್ರಧಾನ ಕಾರ್ಯದರ್ಶಿ ಯೂಸುಫ್ ವಕ್ತಾರ್, ಪದಾಧಿಕಾರಿಗಳಾದ ಮೀನಾಕ್ಷಿ ಪಜೀರ್, ವಿಲಾಸಿನಿ ಅತ್ತಾವರ್, ಮಾಧ್ಯಮ ಕಾರ್ಯದರ್ಶಿ ಉಮ್ಮರ್ ಕುಂಞ ಸಾಲೆತ್ತೂರು ಉಪಸ್ಥಿತರಿದ್ದರು.




