ಕುಂದಾಪುರ: ದ್ವಿಚಕ್ರವಾಹನಕ್ಕೆ ಢಿಕ್ಕಿಯಾಗಿ ಕಡವೆ ಮರಿ ಮೃತ್ಯು
ಕುಂದಾಪುರ: ಚಲಿಸುತ್ತಿದ್ದ ದ್ವಿಚಕ್ರವಾಹನಕ್ಕೆ ಕಡವೆ ಮರಿಯೊಂದು ಅಡ್ಡ ಬಂದ ಪರಿಣಾಮ ಕಡವೆ ಮರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ದ್ವಿಚಕ್ರವಾಹನ ಜಖಂಗೊಡಿದ್ದಲ್ಲದೇ ಸವಾರನಿಗೂ ಗಾಯಗಳಾದ ಘಟನೆ ಮಂಗಳವಾರ ಬೆಳಿಗ್ಗೆ ಕೊಲ್ಲೂರು ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲಾವಿದರೊಬ್ಬರು ಚಿತ್ತೂರು ಕಡೆಯಿಂದ ಕೊಲ್ಲೂರು ಕಡೆಗೆ ಮಂಗಳವಾರ ಬೆಳಿಗ್ಗೆ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದರು. ಬೆಳಗ್ಗಿನ ಸಂದರ್ಭ ಹಾರ್ಮಣ್ಣು ಎಂಬಲ್ಲಿರುವ ಪೆಟ್ರೋಲ್ ಬಂಕ್ ಸಮೀಪ ಬರುತ್ತಿದ್ದಂತೆ ಕಡವೆಮರಿಯೊಂದು ವೇಗವಾಹಿ ರಸ್ತೆಗೆ ಹಾರಿದ ಪರಿಣಾಮ ಸ್ಕೂಟರ್ ಮುಂಭಾಗಕ್ಕೆ ಡಿಕ್ಕಿಹೊಡೆದಿದೆ.
ಅಪಘಾತದ ತೀವ್ರತೆಗೆ ಕಡವೆ ಮರಿಯ ತಲೆಗೆ ಪೆಟ್ಟುಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಸ್ಕೂಟರ್ ಸವಾರನಿಗೂ ಗಾಯಗಳಾಗಿವೆ. ಸ್ಕೂಟರ್ ಮುಂಭಾಗ ಜಖಂಗೊಂಡಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ವಿಚಾರಣೆ ನಡೆಸಿದ್ದಾರೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




