ಮಂಗಳೂರು: ಜ್ಯುವೆಲ್ಲರಿ ಶಾಫ್ ಸಿಬ್ಬಂದಿ ಹತ್ಯೆ ಪ್ರಕರಣ: ಆರೋಪಿಗಾಗಿ ಪೊಲೀಸರಿಂದ ಮುಂದುವರಿದ ಶೋಧ
ಮಂಗಳೂರು: ನಗರದ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಶುಕ್ರವಾರ ಹಾಡಹಗಲೇ ಸಿಬ್ಬಂದಿ ರಾಘವೇಂದ್ರ ಆಚಾರ್ಯರನ್ನು ಚೂರಿಯಿಂದ ಇರಿದು ಕೊಲೆಗೈದು ತಲೆಮರೆಸಿಕೊಂಡಿರುವ ಆರೋಪಿಗಾಗಿ ಬಂದರು ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.’
ಘಟನೆ ವೇಳೆ ಅಂಗಡಿಯಲ್ಲಿದ್ದ ಒಟ್ಟು 12 ಗ್ರಾಂ ತೂಕದ 60,000 ರೂ. ಮೌಲ್ಯದ 3 ಚಿನ್ನದ ಸರಗಳನ್ನು ದರೋಡೆ ಮಾಡಲಾಗಿದೆ.
ಆರೋಪಿಯ ಪತ್ತೆಗಾಗಿ ಅಕ್ಕಪಕ್ಕದ ಅಂಗಡಿಗಳು ಸೇರಿದಂತೆ ಹಲವಾರು ಕಟ್ಟಡಗಳ ಸಿಸಿ ಕೆಮರಾ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ದುಷ್ಕರ್ಮಿ ಕೃತ್ಯ ನಡೆಸಿದ ಬಳಿಕ ತುಂಬಾ ದೂರದವರೆಗೂ ಓಡಿ ಹೋಗಿದ್ದು . ಆರೋಪಿಯ ಚಹರೆಯನ್ನು ಹೋಲುವ ಓರ್ವ ವ್ಯಕ್ತಿ ರಿಕ್ಷಾದಲ್ಲಿ ಹತ್ತಿ ಹೋಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿವೆ.
ಸಾಕಷ್ಟು ಪೂರ್ವಯೋಜಿತವಾಗಿಯೇ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಅಂಗಡಿ ಮಾಲಕರು ಪ್ರತೀದಿನ ಒಂದೇ ಸಮಯಕ್ಕೆ ಊಟಕ್ಕೆ ಹೋಗುತ್ತಿದ್ದರು. ಆ ವೇಳೆ ಸಿಬಂದಿ ರಾಘವೇಂದ್ರ ಮಾತ್ರ ಇರುತ್ತಿದ್ದರು. ಇದನ್ನು ಕೂಡ ಹಲವು ದಿನಗಳಿಂದ ಗಮನಿಸಿಯೇ ದುಷ್ಕರ್ಮಿಗಳು ಶುಕ್ರವಾರ ಕೃತ್ಯ ಎಸಗಿರುವ ಸಾಧ್ಯತೆ ಇದೆ
ದುಷ್ಕರ್ಮಿ ಮಾಸ್ಕ್, ಕ್ಯಾಪ್ ಮತ್ತು ಜರ್ಕಿನ್ ಧರಿಸಿದ್ದ. ಆತ ಕೃತ್ಯ ನಡೆಸುವಾಗಲೂ ಅದನ್ನು ತೆಗೆದಿರಲಿಲ್ಲ . ಅಲ್ಲದೆ ಜುವೆಲರಿ ಅಂಗಡಿಯೊಳಗಿನ ಸಿಸಿ ಕೆಮರಾದ ದೃಶ್ಯ ಸಮರ್ಪಕವಾಗಿ ದೊರೆಯದೇ ಇರುವುದು ಕೂಡ ತನಿಖೆಗೆ ತೊಡಕಾಗಿದೆ.