ಮಂಗಳೂರು: ದ.ಕ. ಜಿಲ್ಲಾ ಎಸ್ಪಿ ಋಷಿಕೇಷ್ ಸೋನಾವಾಣೆ ಭಗವಾನ್ ವರ್ಗಾವಣೆ : ಜಿಲ್ಲೆಗೆ ಅಮಾತೆ ವಿಕ್ರಮ್ ನೂತನ ಎಸ್ಪಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ಋಷಿಕೇಷ್ ಸೋನಾವಾಣೆ ಭಗವಾನ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಜಿಲ್ಲೆಗೆ ಅಮಾತೆ ವಿಕ್ರಮ್ ಅವರನ್ನು ನೂತನ ಎಸ್ಪಿಯಾಗಿ ನಿಯೋಜಿಸಿ ಸರಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ನಾಲ್ವರು ಎಸ್ಪಿ ದರ್ಜೆಯ ಐಪಿಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡ ಎಸ್ಪಿ ಋಷಿಕೇಷ್ ಸೋನವಾಣೆ ಭಗವಾನ್ ಅವರನ್ನು ಗುಪ್ತಚರ ವಿಭಾಗದ ಎಸ್ಪಿಯಾಗಿ ವರ್ಗಾಯಿಸಲಾಗಿದ್ದು ಖಾಲಿಯಾದ ಇಲ್ಲಿನ ಹುದ್ದೆಗೆ ಗುಪ್ತಚರ ವಿಭಾಗದಲ್ಲಿದ್ದ ಅಮಾತೆ ವಿಕ್ರಮ್ ಅವರನ್ನು ನಿಯೋಜನೆ ಮಾಡಲಾಗಿದೆ.
2015ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಋಷಿಕೇಶ್ ಸೋನವಾಣೆ ದಕ್ಷಿಣ ಕನ್ನಡ ಜಿಲ್ಲೆಯ ಎಸ್’ಪಿಯಾಗಿ ನೇಮಕಗೊಂಡ ಬಳಿಕ ಉತ್ತಮ ಹೆಸರುಗಳಿಸಿದ್ದರು. ಹಲವು ಪ್ರಕರಣಗಳನ್ನು ಸದ್ದಿಲ್ಲದೆ ಭೇದಿಸಿದ್ದು ಸೋನವಾಣೆ ಹೆಗ್ಗಳಿಕೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ರಾಜ್ಯದಲ್ಲಿ ಸಂಚಲನ ಎಬ್ಬಿಸಿದ್ದರು. ಎನ್ಐಎ ಜೊತೆ ಸೇರಿ ಒಂದೇ ವಾರದಲ್ಲಿ ಪ್ರಕರಣದ ಜಾಡು ಪತ್ತೆ ಮಾಡಿದ್ದರು. ಅಲ್ಲದೆ, 15 ದಿನಗಳಲ್ಲಿ ಎಂಟು ಮಂದಿಯನ್ನು ಬಂಧಿಸುವಲ್ಲಿ ಸುಳ್ಯ ಮತ್ತು ಬಂಟ್ವಾಳ ಪೊಲೀಸರ ವಿಶೇಷ ತಂಡ ಯಶಸ್ವಿಯಾಗಿತ್ತು. ಇದರ ಹಿಂದೆ ಋಷಿಕೇಶ್ ಅವರು ಸದ್ದಿಲ್ಲದೆ ಕೆಲಸ ಮಾಡಿದ್ದರು.
ಇದೇ ವೇಳೆ, ಬೀದರ್ ಜಿಲ್ಲಾ ಎಸ್ಪಿಯಾಗಿದ್ದ ಡೆಕ್ಕ ಕಿಶೋರ್ ಬಾಬು ಅವರನ್ನು ವೈರ್ ಲೆಸ್ ವಿಭಾಗದ ಎಸ್ಪಿಯಾಗಿ ವರ್ಗ ಮಾಡಲಾಗಿದೆ. ಹುಬ್ಬಳ್ಳಿ ಹೆಸ್ಕಾಂ ಎಸ್ಪಿ ಆಗಿದ್ದ ಚೆನ್ನಬಸವಣ್ಣ ಲಂಗೋಟಿ ಅವರನ್ನು ಬೀದರ್ ಜಿಲ್ಲೆಯ ಎಸ್ಪಿಯಾಗಿ ಮಾಡಲಾಗಿದೆ.